ಪತ್ರಕರ್ತರು ವಸ್ತುನಿಷ್ಠ, ನೈಜ ವರದಿಗಳನ್ನು ಬೆಳಕಿಗೆ ತರಬೇಕು : ಶಾಸಕ ಲಕ್ಷ್ಮಣ ಸವದಿ

ಅಥಣಿ : ಆ.5:ಪತ್ರಕರ್ತರು ತಮ್ಮ ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡು ನೈಜ ವರದಿಗಳನ್ನು ನೀಡುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪಟ್ಟಣದ ಎಸ್ ಎಸ್ ಎಂ ಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಅಥಣಿ ತಾಲೂಕ ಘಟಕದಿಂದ ಆಯೋಜಿಸಲಾಗಿದ್ದ ತಾಲೂಕ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಕ್ಷೇತ್ರ ಇಂದು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುದ್ದಿಗಳು ಪ್ರಸಾರವಾಗುತ್ತಿದ್ದರು ಮುದ್ರಣ ಮಾಧ್ಯಮ ತನ್ನ ಮಹತ್ವವನ್ನ ಉಳಿಸಿಕೊಂಡು ಬಂದಿದೆ.
ಪತ್ರಿಕೆಗಳು ಮತ್ತು ಮಾಧ್ಯಮಗಳು ಸರ್ಕಾರ ಇಲ್ಲವೇ ನಮ್ಮಂತಹ ಜನಪ್ರತಿನಿಧಿಗಳನ್ನು ಅನೇಕ ಸಂದರ್ಭಗಳಲ್ಲಿ ಟೀಕಿಸುತ್ತವೆ. ಆದರೆ ತಮ್ಮ ಟೀಕೆಗಳು ಸಕಾರಾತ್ಮಕವಾಗಿದ್ದರೂ ಅವುಗಳನ್ನು ಸಲಹೆ ಎಂದು ಸ್ವೀಕರಿಸುತ್ತೇವೆ. ಪತ್ರಕರ್ತರು ಸಮಾಜದ ಆರೋಗ್ಯಕರ ಬೆಳವಣಿಗೆಗಾಗಿ ಸಕಾರಾತ್ಮಕ ಆಲೋಚನೆಗಳೊಂದಿಗೆ ವರದಿ ನೀಡಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ, ನೋವು ನಲಿವುಗಳಿಗೆ ಸ್ಪಂದಿಸಿ ಎಲೆ ಮರಿಯ ಕಾಯಿಯಂತೆ ಕೆಲಸ ಮಾಡುವ ಅನೇಕ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿಲೇನಿಯಮ್ ಸ್ಟಾರ್ಚ್ ಇಂಡಿಯಾ ಪ್ರೈ. ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಿಖಿಲ ಪಾಟೀಲ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆಯ ಅಂಗ ಎನಿಸಿಕೊಂಡಿರುವ ಪತ್ರಿಕಾರಂಗವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ.ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಅನೇಕ ಸಮಸ್ಯೆಗಳಿದ್ದು. ಪತ್ರಿಕೋದ್ಯಮದ ಜೊತೆಗೆ ಅನೇಕ ಉದ್ಯೋಗಗಳನ್ನು ಅವಲಂಬಿಸಬೇಕಾಗಿದೆ ನಾನು ಒಬ್ಬ ಉದ್ಯಮಿಯಾಗಿ ಅಥಣಿ ವಲಯದಲ್ಲಿ ರೈತ ನಾಯಕರು ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಮಿಲೇನಿಯಮ್ ಸ್ಟಾರ್ಚ್ ಕಾರ್ಖಾನೆಯನ್ನು ಆರಂಭಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿದ್ದಲ್ಲದೆ ನೂರಾರು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಇತ್ತೀಚಿಗೆ ಪ್ರಿಯಾ ಎಕ್ಸ್ಪೋರ್ಟ್ ಕಂಪನಿಯನ್ನು ಆರಂಭಿಸುವ ಮೂಲಕ ಬೇಬಿ ಕಾರ್ನ್ ಮತ್ತು ಸೌತೆಕಾಯಿ ಉಪ್ಪಿನಕಾಯಿಗಳನ್ನು ತಯಾರಿಸಿ ಜಗತ್ತಿನ 12 ದೇಶಗಳಿಗೆ ಪೂರೈಕೆ ಮಾಡುತ್ತಿದ್ದೇವೆ ಎಂಬ ಖುಷಿ ಹಂಚಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ. ಈ ಭಾಗದ ರೈತರು ನಮ್ಮ ಕಾರ್ಖಾನೆಗೆ ಬೇಕಾಗುವ ಉತ್ಪನ್ನಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಯಲು ಬೀಜ ಮತ್ತು ಔಷಧಿಗಳನ್ನು ನೀಡುವ ಮೂಲಕ ವಿಶೇಷ ತರಬೇತಿ ಕೂಡ ನೀಡಲಾಗುತ್ತಿದೆ. ರೈತರು, ನಿರುದ್ಯೋಗಿ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕಾರ್ಯಕರ್ತರ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮನೆ ಮನೆಗೆ ಪತ್ರಿಕೆಗಳನ್ನ ಹಂಚುವ ಪತ್ರಿಕಾ ವಿತರಕರಿಗೆ ಜರ್ಕಿನ್ ಮತ್ತು ಟೀ ಶರ್ಟ್ ಗಳನ್ನು ವಿತರಿಸಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲಾವಿದರಾದ ವಿಜಯ ಹುದ್ದಾರ ಹಾಗೂ ರಾಜು ಮಮದಾಪುರ, ಅವರಿಂದ ಸಂಗೀತ ರಸಮಂಜರಿ ಜರುಗಿತು.
ಸಮಾರಂಭದಲ್ಲಿ ಎಸ್ ಎಸ್ ಎಮ್ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಬಿ ಎಸ್ ಕಾಂಬಳೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿಗಳಾದ ಸುಕುಮಾರ ಬನ್ನೂರೆ, ಬಸಪ್ಪ ಚಮಕೇರಿ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಶಂಭು ಮಮದಾಪುರ, ಅನಿಲ್ ಮೆಣಸಿ, ವಿಜಯ್ ಬುರ್ಲಿ, ಹಿರಿಯ ಪತ್ರಕರ್ತ ಸಿ.ಎ ಇಟ್ನಾಳಮಠ, ಸೇರಿದಂತೆ ಪತ್ರಕರ್ತರ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.ಅಣ್ಣಾಸಾಬ ತೆಲಸಂಗ ಸ್ವಾಗತಿಸಿದರು. ಶಿವಕುಮಾರ ಅಪರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಗಾಲಿ ನಿರೂಪಿಸಿದರು. ವಿಜಯಕುಮಾರ ಅಡಹಳ್ಳಿ ವಂದಿಸಿದರು.

#
 " ಸಾಧಕರಿಗೆ ಸನ್ಮಾನ "

ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಿಲೇನಿಯಮ್ ಸ್ಟಾರ್ಚ್ ಇಂಡಿಯಾ ಪ್ರೈ. ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಿಖಿಲ ಪಾಟೀಲ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಟ್ಟಣದ ಖ್ಯಾತ ವೈದ್ಯ ಡಾ. ಮಲ್ಲಿಕಾರ್ಜುನ ಹಂಜಿ, ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ದಕ್ಷ ಪೆÇಲೀಸ್ ಅಧಿಕಾರಿ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಸಾಮಾಜಿಕ ಸೇವೆಯಲ್ಲಿ ಸಾಧನೆ ಮಾಡಿದ ಹಿರಿಯ ನ್ಯಾಯವಾದಿ ಕೆ.ಎ ವಣಜೋಳ, ಶೈಕ್ಷಣಿಕ ಸುಧಾರಣೆಯಲ್ಲಿ ಸಾಧನೆ ಮಾಡಿದ ಆದರ್ಶ ಶಿಕ್ಷಕಿ ಸೌಮ್ಯಾ ರಾಯಪ್ಪ ಗೋಕಾಕ, ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಏಷ್ಯಾನ್ಯೆಟ್ ಸುವರ್ಣ ನ್ಯೂಸ್ ವರದಿಗಾರ ಷಡಕ್ಷರಿ ಕಂಪನ್ನವರ ಅವರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು

#

ಪತ್ರಕರ್ತರಿಗೂ ಅನೇಕ ಸಾಮಾಜಿಕ ಜವಾಬ್ದಾರಿಗಳಿವೆ. ನೈಜ ಹಾಗೂ ನಿಷ್ಠುರತೆಯ ವರದಿಗಳನ್ನು ಪ್ರಕಟಿಸುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸವಾಲುಗಳನ್ನು ಗೆದ್ದವರೇ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ,
ಅನೇಕ ದೃಶ್ಯ ಮಾಧ್ಯಮಗಳು ಇಂದು ವರದಿಗಳನ್ನ ಬಿತ್ತರಿಸುತ್ತಿರುವ ರೀತಿಯನ್ನು ನೋಡಿದಾಗ ಒಮ್ಮೆ ಗಾಬರಿಯಾಗುತ್ತದೆ. ಸಣ್ಣಪುಟ್ಟ ಘಟನೆಗಳನ್ನು ವೈಭವೀಕರಿಸಿ ಪ್ರಸಾರ ಮಾಡುವ ಬದಲು ಸಾಮಾಜಿಕ ಕಳಕಳಿ ಹೊಂದಿದ ಸತ್ಯ ಸಂಗತಿಗಳನ್ನು ತೋರಿಸುವ ಕೆಲಸವನ್ನ ಮಾಡಬೇಕು. ಪತ್ರಕರ್ತರು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ವಸ್ತುನಿಷ್ಠ ವರದಿಗಳನ್ನು, ನೈಜ ಸಂಗತಿಗಳನ್ನು ಬೆಳಕಿಗೆ ತಂದಾಗ ಆತ ಒಬ್ಬ ಯಶಸ್ವಿ ಪತ್ರಕರ್ತ ಎನಿಸಿಕೊಳ್ಳುತ್ತಾನೆ,

         ------  ಲಕ್ಷ್ಮಣ ಸವದಿ
  ಮಾಜಿ ಡಿಸಿಎಂ ಹಾಗೂ ಶಾಸಕರು