ಪತ್ರಕರ್ತರು ಲೇಖನದ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಲಿ: ಡಾ. ತಮೀಮ್

ತುಮಕೂರು, ಜು. ೨೦- ವೈದ್ಯರು ರೋಗಿಯ ನಿವಾರಣೆಗೆ ಚಿಕಿತ್ಸೆಯ ಕ್ರಮ ವಹಿಸಿದರೆ ಪತ್ರಕರ್ತರು ಲೇಖನದ ಮೂಲಕ ಸಮಾಜಕ್ಕೆ ಪರಿಹಾರ ಕೊಡಲು ಯತ್ನಿಸುತ್ತಾರೆ. ಈ ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಾದರೂ ಸಮಾಜದ ದೂಷಣೆಗೆ ಒಳಗಾಗಬೇಕಾಗುತ್ತದೆ ಎಂದು ಸಿದ್ಧಾರ್ಥ ಅಡ್ವಾನ್ಸಡ್ ಹಾರ್ಟ್ ಹಾಗೂ ಕಾರ್ಡಿಯಾಕ್ ಆಸ್ಪತ್ರೆ ಹೃದ್ರೋಗ ಕೇಂದ್ರದ ಮುಖ್ಯಸ್ಥ ಡಾ. ತಮೀಮ್ ಅಹಮದ್ ಹೇಳಿದರು. ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಪಿ.ಜಿ. ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಮಾಧ್ಯಮ ಹಬ್ಬಸಂಭ್ರಮ ಕಾರ್ಯಕ್ರಮದಲ್ಲಿ ನಡೆದ ಮಾಧ್ಯಮ-ಆರೋಗ್ಯ ಸಂವಹನ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೈದ್ಯರು ಹಾಗೂ ಪತ್ರಕರ್ತರದ್ದು ಸವಾಲಿನ ಜೀವನವಾಗಿದ್ದು, ಸಮಸ್ಯೆ ಕೇಂದ್ರಿತವಾಗಿಯೇ ಪರಿಹಾರ ಹುಡಕಲು ನಿರಂತರ ಶ್ರಮ ಹಾಕಬೇಕಾಗುತ್ತದೆ ಎಂದರು.
ಇನ್ನೂ ಆರೋಗ್ಯ ಜಾಗೃತಿ ಕೇವಲ ವೈದ್ಯರು ಮಾತ್ರ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ಬಳಿ ಬರುವ ರೋಗಿಗಳಿಗೆ ಮಾಹಿತಿ ನೀಡಿ ಅರಿವು ಮೂಡಿಸಬಹುದೇ ಹೊರತು ಸಮೂಹ ತಲುಪಲು ಮಾಧ್ಯಮಗಳ ಪ್ರಚಾರ ಅತ್ಯವಶ್ಯಕ ಎಂದರು.
ಸುದ್ದಿ ವಿದ್ಯಮಾನಗಳ ಒತ್ತಡದಲ್ಲಿ ಸದಾ ತೊಡಗಿಕೊಳ್ಳುವ ಮಾಧ್ಯಮ ಮಂದಿ ತಮಗಾಗಿ ತಮ್ಮ ಕುಟುಂಬದವರ ಕಾಳಜಿಗಾದರೂ ನಿತ್ಯ ಎರಡು ತಾಸು ಧ್ಯಾನ, ಯೋಗ, ವ್ಯಾಯಾಮದಲ್ಲಿ ತೊಡಗಿಕೊಳ್ಳುವಂತೆ ಅವರು ತಿಳಿಸಿದರು.
ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಜೆ.ಕುಮಾರ್, ಪತ್ರಿಕೆ, ಟಿವಿಗಳಿಂದ ಸಾಮಾನ್ಯ ಜನರು ಸತ್ಯವನ್ನು ಹೆಚ್ಚು ನಿರೀಕ್ಷಿಸುತ್ತಿದ್ದು, ಯುವ ಪತ್ರಕರ್ತರು ಸತ್ಯದ ಪರವಾದ ನಿಲುವನ್ನೇ ತಮ್ಮ ವರದಿಗಾರಿಕೆಯಲ್ಲಿ ಪ್ರದರ್ಶಿಸಬೇಕಿದೆ ಎಂದರು. ಸಂವಿಧಾನದ ಜಾತ್ಯಾತೀತ ಮೌಲ್ಯಗಳೇ ಮಾಧ್ಯಮಗಳಿಗೂ ಆಧಾರವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಅರಿವು ಇತ್ತೀಚಿನ ಪೀಳಿಗೆಗೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಮೂಡಿಸುವ ಜವಾಬ್ದಾರಿ ಜನಪ್ರತಿನಿಧಿಗಳು, ಮಾಧ್ಯಮಗಳ ಮೇಲಿದೆ ಎಂದರು.
ಪತ್ರಕರ್ತ ಶಶಿಧರ್ ದೋಣಿಹಕ್ಲು ಮಾತನಾಡಿ, ಜನಪರ-ಜನಪ್ರಿಯ ಸುದ್ದಿಗಳ ನಡುವೆ ಜನಪರ ಸುದ್ದಿಗೆ ಆದ್ಯತೆ ಕೊಡಬೇಕಿರುವುದು ಪತ್ರಕರ್ತರಾದವರ ಕರ್ತವ್ಯ. ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿಂದ ಹೊರ ಬಂದ ವಿದ್ಯಾರ್ಥಿಗಳು ರಾಜ್ಯ, ಜಿಲ್ಲಾ ಮಟ್ಟದ ಅನೇಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಕಲಿಕಾ ಸೌಲಭ್ಯದ ಮಾಧ್ಯಮ ಕೇಂದ್ರ ತುಮಕೂರಿನಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ತಮೀಮ್ ಅಹಮದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟಿ.ಇ.ರಘುರಾಂ, ಎಸ್‌ಎಸ್‌ಎಂಎಸ್ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಪ್ರಾಧ್ಯಾಪಕರಾದ ಡಾ.ಯು.ಡಿ. ನಾಗೇಂದ್ರ, ಶ್ವೇತಾ, ಜ್ಯೋತಿ, ಹರೀಶ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.