ಪತ್ರಕರ್ತರು ಪಕ್ಷಪಾತಿಗಳಾಗಬಾರದು – ಲೋಕೇಶ ವಿ ನಾಯಕ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 27 :- ಪತ್ರಕರ್ತರು ಯಾವುದೇ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಇರಬಾರದು ಬದಲಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಜವಾಬ್ದಾರಿಯಿಂದ ವಸ್ತುನಿಷ್ಠ ವರದಿಗಳನ್ನು ಮಾಡುವುದರ ಮೂಲಕ ವೃತ್ತಿಘನತೆಯನ್ನು ಕಾಪಾಡಿಕೊಳ್ಳುವ ಅಗತ್ಯತೆ ಇದೆ ಎಂದು ಕೆಪಿಸಿಸಿ ಸದಸ್ಯ ಲೋಕೇಶ ವಿ ನಾಯಕ ಪತ್ರಕರ್ತರಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಜ್ಞಾನಭಾರತಿ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಪತ್ರಕರ್ತರು ಪಕ್ಷದ ಏಜೇಂಟರಂತೆ ವರ್ತಿಸದೇ ವಿರೋಧಪಕ್ಷದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ವ್ಯವಸ್ಥೆಗೆ ಹೊಂದಿಕೊಂಡು ಶೋಷಿತರ, ದಮನಿತರ ಧ್ವನಿಗಳಿಗೆ ಕಿವಿಗೊಡದೆ ಇರುವುದು  ದುರಂತವೇ ಸರಿ, ಆಧುನಿಕ ಜಗತ್ತಿನಲ್ಲಿ ನೈತಿಕ ಮೌಲ್ಯ ಗಳನ್ನು ತಿದ್ದಲು ಪತ್ರಕರ್ತರ ಪಾತ್ರ ಮಹತ್ತರವಾದುದು ಇದನ್ನರಿತ ಪತ್ರಕರ್ತರು ಸಮಾಜಮುಖಿಯಾಗಿ ಮಾದರಿಯಾಗಬೇಕು ಎಂದು ಲೋಕೇಶ ವಿ ನಾಯಕ ಸೂಚ್ಯವಾಗಿ ತಿಳಿಸಿದರು.
ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ  ಕೂಡ್ಲಿಗಿ ಹಿರೇಮಠ ಸಂಸ್ಥಾನದ  ಪ್ರಶಾಂತಸಾಗರ ಸ್ವಾಮೀಜಿ ಮಾತನಾಡುತ್ತ  ದೇಶದ ರಕ್ಷಣೆಗಾಗಿ ತಮ್ಮಪ್ರಾಣದ ಹಂಗು ತೊರೆದು ಗಡಿಗಳಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಂತೆ, ಸಮಾಜದ ಸ್ವಾಸ್ಥ್ಯಕ್ಕಾಗಿ ಹಗಲಿರುಳು ಸುದ್ದಿಯ ಹುಡುಕಾಟದ ಕಾಯಕದಲ್ಲಿ ನಿರತರಾಗುವ ಪತ್ರಕರ್ತರ ಸೇವೆಯೂ ಅನನ್ಯ,
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುವ ಪತ್ರಿಕಾ ರಂಗದಲ್ಲಿ ದುಡಿಯುವ ಪತ್ರಕರ್ತರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಕೆಲಸ ಮಾಡುವುದು ಒಳ್ಳೆಯ ಬೆಳವಣಿಗೆ. ಯಾರ ಮುಲಾಜಿಲ್ಲದೇ, ಯಾವುದೇ ಪಕ್ಷಪಾತಿ ತೋರದೇ ಮತ್ತು ಸಮಾಜಕ್ಕೆ ಮಾರಕವಾಗದಂತೆ ನಿಸ್ವಾರ್ಥ, ನಿಷ್ಪಕ್ಷಪಾತ ಹಾಗೂ ವಾಸ್ತವಾಂಶದ ವರದಿಗಳನ್ನು ಬರೆಯುವ ಗುಣ ಪತ್ರಕರ್ತರಲ್ಲಿ ಇದ್ದಾಗ ಮಾತ್ರ ಅವರೊಬ್ಬ ಸಮಾಜಮುಖಿ ಪತ್ರಕರ್ತರಾಗಲು ಸಾಧ್ಯ. ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಪತ್ರಕರ್ತರು ಉತ್ತಮ ವರದಿಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯವಾಗಿದೆ. ಶಾಸಕಾಂಗ, ಕಾರ್ಯಾಂಗವನ್ನು ಎಚ್ಚರಿಸುವ ಕೆಲಸಗಳು ಪತ್ರಿಕೆಗಳಿಂದ ಸಾಧ್ಯವಿದೆ. ಆ ನಿಟ್ಟಿನಲ್ಲಿ ಪತ್ರಿಕೆಗಳು ಮತ್ತು ವರದಿಗಾರರು ಕರ್ತವ್ಯ ನಿರ್ವಹಿಸಲಿ ಎಂದು  ಪ್ರಶಾಂತ ಸಾಗರ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕೂಡ್ಲಿಗಿ ಹಿರೇಮಠ ವಿದ್ಯಾಪೀಠ ಕಾಲೇಜಿನ  ಕನ್ನಡ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ಮಾತನಾಡಿ, ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರು ಸಮಾಚಾರ ಸೇರಿ  ಪತ್ರಿಕೋದ್ಯಮ ನಡೆದು ಬಂದ ದಾರಿಯ ಕುರಿತು ಮಾತನಾಡಿದರು ಹಾಗೂ ಪತ್ರಕರ್ತರು ಹಾಗೂ ಸಮಾಜದ ಬಾಂದವ್ಯ, ವೃತ್ತಿನಿರತೆ ಕುರಿತು ಸವಿವರವಾಗಿ ತಿಳಿಸಿದರು.
ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯ ಆಶೀರ್ವಚನ ನೀಡಿದರು. ಕೆಯುಡಬ್ಲ್ಯುಜೆ ವಿಜಯನಗರ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ,  ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಭೀಮೇಶ, ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ರಘು,ಬಿಜೆಪಿ ಮುಖಂಡ  ಬಂಗಾರು ಹನುಮಂತು, ಜೆ ಡಿ ಎಸ್ ಮುಖಂಡ ನೂರ್ ಅಹ್ಮದ್, ಪಟ್ಟಣ ಪಂಚಾಯಿತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಡಿವೈಎಸ್ಪಿ ಹರೀಶ್ ರೆಡ್ಡಿ, ತಾಪಂ ಮಾಜಿ ಸದಸ್ಯ ಹುಡೇಂ ಜಿ.ಪಾಪನಾಯಕ ಇತರರು ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಂಜು ಮಯೂರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ವೈ.ರವಿಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಚಂದ್ರು, ಸದಸ್ಯ ಶುಕುರ್, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಮಣಿ ಜಿಂಕಲ್, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಯಡೆಯೂರು ಸಿದ್ಧಲಿಂಗೇಶ್ವರ ಸಮೂಹ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರವಿಕುಮಾರ್, ಪಪಂ ಮಾಜಿ ಸದಸ್ಯ ಹಾಗೂ ದ ಸಂ ಸ ವಿಜಯನಗರ ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ಮುಖಂಡರಾದ ಸೂರ್ಯಪಾಪಣ್ಣ, ಹುರುಳಿಹಾಳು ರೇವಣ್ಣ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಸಿಪಿಐ ವಸಂತ ವಿ.ಅಸೋದೆ, ಕೆಯುಡಬ್ಲ್ಯುಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಲಕ್ಷ್ಮಣ ಇತರರಿದ್ದರು.
ಪತ್ರಿಕಾ ದಿನಾಚರಣೆಯ ನಿಮಿತ್ತ ಕೂಡ್ಲಿಗಿ ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಭಾಗವಹಿಸಿದ ಗಣ್ಯರು ಸನ್ಮಾನಿಸಿದರು ಮತ್ತು  ಇದೇ ಸಂದರ್ಭದಲ್ಲಿ ಕೂಡ್ಲಿಗಿಯ ಹಿರಿಯ ಪತ್ರಕರ್ತ ಭೀಮಣ್ಣ ಅವರ ಜನುಮದಿನದ ಹಿನ್ನೆಲೆಯಲ್ಲಿ  ಅವರಿಗೆ ಕಾರ್ಯಕ್ರಮದಲ್ಲಿದ್ದ  ಸ್ವಾಮೀಜಿಗಳು, ಗಣ್ಯರು ಸನ್ಮಾನಿಸಿ ಶುಭ ಕೋರಿದರು.