ಪತ್ರಕರ್ತರಿಗೆ ಸರಕಾರ ಸಹಾಯ ನೀಡಲಿ : ಪಲುಗುಲ ನಾಗರಾಜ

ರಾಯಚೂರು.ಜೂ.೦೫-ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ ಪತ್ರಕರ್ತರಿಗೆ ಮತ್ತು ಪತ್ರಿಕೆಗಳಿಗೆ ರಾಜ್ಯ ಸರಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಚಿಂತಕ , ಸಾಹಿತಿ ಪಲುಗುಲ ನಾಗರಾಜ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಕೊರೊನಾ ವೈರಸ್ ಬದುಕಿಗೆ ಕಂಟಕವಾಗಿದೆ ಇದರಿಂದ ಆದಾಯವಿಲ್ಲದೇ ಜೀವನ ದುಸ್ಥರವಾಗಿದೆ ಇದಕ್ಕೆ ಪತ್ರಿಕೋದ್ಯಮ, ಪತ್ರಕರ್ತರು ಹೊರತಾಗಿಲ್ಲ. ಲಾಕ್ಡೌನ್ ನಿಂದ ಪತ್ರಿಕೆ ಪ್ರಸಾರ ಸಂಖ್ಯೆ ಕಡಿಮೆಯಾಗಿದೆ ದೊಡ್ಡ ದೊಡ್ಡ ಪತ್ರಿಕೆಗಳೇ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಇನ್ನೂ ಪತ್ರಕರ್ತರ ಜೀವನ ಸಹ ತೂತು ಬಿದ್ದ ದೋಣಿಯ ಪಯಣದಂತೆ ಆಗಿದೆ. ಕಾರಣ ಪತ್ರಿಕೆ ಪ್ರಸಾರ ಸಂಖ್ಯೆ ಇಳಿ ಮುಖವಾದಂತೆ ವರದಿಗಾರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಅದರಲ್ಲೂ ಜಿಲ್ಲಾ ಮಟ್ಟದ ಸಣ್ಣ ಸಣ್ಣ ಪತ್ರಿಕೆಗಳು ಬಹಳ ಸಂಕಷ್ಟ ಎದುರಿಸುತ್ತಿವೆ. ಕೊರೊನಾ ಮಹಾ ಮಾರಿ ಲೆಕ್ಕಿಸದೇ ಇತ್ತ ಪತ್ರಿಕೆ ವರದಿಗಾರ ಜೀವದ ಹಂಗು ತೊರೆದು ಗಲ್ಲಿ ಗಲ್ಲಿ ಸುತ್ತಾಡಿ ವರದಿ ತರುತ್ತಾನೆ. ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ವಾಸ್ತವ ತಿಳಿಸುತ್ತಾನೆ ಹೀಗೆ ಸಂಚರಿಸುವಾಗ ಕೊರೊನಾ ಸೋಂಕು ತಗುಲಿ ಪತ್ರಕರ್ತರು ಸಾವನ್ನಪ್ಪಿದ್ದೂ ಉಂಟು ಇವರ ಈ ಸೇವೆಯನ್ನು ಕಂಡು ರಾಜ್ಯ ಸರಕಾರ ಪತ್ರಕರ್ತರಿಗೆ ಕೊರೊನಾ ವಾರಿಯರ್ಸ್ ಎನ್ನುವ ಪಟ್ಟ ನೀಡಿದರು ಹೀಗೆ ಕೊಟ್ಟ ವಾರಿಯರ್ಸ್ ಪಟ್ಟ ಕೇವಲ ಲಸಿಕೆ ಹಾಕಿಸಿಕೊಳ್ಳಲು ಆಧ್ಯತೆ ನೀಡಿತೆ ಹೊರತು ಅವರ ಜೀವನ ಸಂಕಷ್ಟಕ್ಕೆ ಮುಂದಾಗಲಿಲ್ಲ.
ರಾಜ್ಯ ಸರಕಾರ ಕೊರೊನಾ ಸಂಕಷ್ಟದಲ್ಲಿ ಇರುವವರಿಗೆ ಎರಡು ಹಂತಗಳಲ್ಲಿ ಪರಿಹಾರ ಘೋಷಣೆ ಮಾಡಿದೆ ಹಲವಾರು ಉದ್ಯಮಗಳಿಗೆ ,ವರ್ಗಗಳಿಗೆ ಆರ್ಥಿಕ ಸಹಾಯ ನೀಡಿದೆ ಆದರೆ ಅಲ್ಲಿ ಪತ್ರಕರ್ತರಿಗೆ ಮಾತ್ರ ನೆರವು ಸಿಗಲಿಲ್ಲ. ರಾಜ್ಯದಲ್ಲಿ ಅದೆಷ್ಟೋ ಪತ್ರಿಕೆಗಳು ತಮ್ಮ ವರದಿಗಾರರಿಗೆ ಸಂಬಳ ಕೊಡದ ಸ್ಥಿತಿಯಲ್ಲಿ ಇವೆ ಆದ್ದರಿಂದ ಸರಕಾರ ಕಾರ್ಯ ನಿರತ ಪತ್ರಕರ್ತರನ್ನು ಪರಿಗಣಿಸಿ ಅವರಿಗೆ ಕನಿಷ್ಠ ೧೦ ಸಾವಿರ ವಾರಿಯರ್ಸ್ ಸೇವಾ ಭತ್ಯೆಯನ್ನು ನೀಡಬೇಕು ಜೊತೆಗೆ ಜಿಲ್ಲೆಯ ಸಣ್ಣ ಪತ್ರಿಕೆಗಳಿಗೆ ಸರಕಾರ ಜಾಹೀರಾತು ಗಳನ್ನು ನೀಡಿ ಪ್ರೋತ್ಸಾಹ ನೀಡಬೇಕು ಎಂದು ಸಾಹಿತಿ ಪಲುಗುಲ ನಾಗರಾಜ ಸರಕಾರಕ್ಕೆ ಆಗ್ರಹಿಸಿರುತ್ತಾರೆ.