ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸಿಎಂಗೆ ಮನವಿ

ಮಂಗಳೂರು, ಮೇ ೨೧- ಕೋವಿಡ್-೧೯, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡ ಬೇಕು ಎಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮನವಿ ಸಲ್ಲಿಸಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್ ಮೂಲಕ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಕೋವಿಡ್-೧೯, ಲಾಕ್‌ಡೌನ್‌ನಿಂದಾಗಿ ಪತ್ರಕರ್ತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಪತ್ರಕರ್ತರ ಸ್ಥಿತಿ ಶೋಚನೀಯವಾಗಿದೆ. ಅವರಿಗೆ ಸಂಬಳ, ಗೌರವಧನ ಇಲ್ಲದಾಗಿದೆ. ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಅವರಿಗೆ ಜೀವನ ಸಾಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚಿಗೆ ಸರಕಾರ ಪತ್ರಕರ್ತರನ್ನು ಫ್ರಂಟ್‌ಲೈನ್ ವಾರಿಯಸ್ ಎಂದು ಘೋಷಣೆ ಮಾಡಿ ಕೇವಲ ಕೋವಿಡ್ ಲಸಿಕೆಯನ್ನು ಮಾತ್ರ ನೀಡುತ್ತಿದೆ. ಪತ್ರಕರ್ತರಿಗೆ ಇತರ ಯಾವುದೇ ಸೌಲಭ್ಯ ಸರಕಾರದಿಂದ ದೊರೆಯುತ್ತಿಲ್ಲ. ಹಾಗಾಗಿ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.