ಪತ್ರಕರ್ತರಿಗೆ ಯುವಕಾಂಗ್ರೇಸ್‌ನಿಂದ ಕಿಟ್ ವಿತರಣೆ

ಪುತ್ತೂರು, ಜೂ.೧೧- ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತಾಲೂಕಿನ ಪತ್ರಕರ್ತರಿಗೆ ಯುವಕ ಕಾಂಗ್ರೆಸ್ ವತಿಯಿಂದ ಗುರುವಾರ ದಿನಸಿ ಸಾಮಗ್ರಿ ಮತ್ತು ಮಾಸ್ಕ್‌ಗಳನ್ನು ವಿತರಿಸಲಾಯಿತು. ಪುತ್ತೂರಿನ ಪತ್ರಿಕಾ ಭವನದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ ಅಧ್ಯಕ್ಷತೆಯಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರು ಪತ್ರಕರ್ತರಿಗೆ ಸಹಕಾರ ನೀಡುತ್ತಿರುವುದು ವಸ್ತು ಸ್ಫೂರ್ತಿಯಲ್ಲ ಚಿಂತನಾ ಸ್ಫೂರ್ತಿಯಾಗಿದೆ. ಯುವಕ ಕಾಂಗ್ರಸ್ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಸಾಮಾಜಿಕ ಕೆಲಸ ಕಾರ್ಯಗಳನ್ನು ನಡೆಸುತ್ತಿದೆ. ಇದೀಗ ಪತ್ರಕರ್ತರಿಗೂ ಗೌರವ ನೀಡುವ ಕೆಲಸ ಮಾಡಿರುವುದು ಮಾದರಿಯಾಗಿದೆ ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಕೊರೊನಾ ಲಾಕ್‌ಡೌನ್‌ನಿಂದಾಗಿ ಜನರು ರೋಗಕ್ಕಿಂತಲೂ ಹಸಿವಿನಿಂದ ಬಾಧೆಯಿಂದ ಬಳಲುವಂತಾಗಿದೆ. ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಇದಕ್ಕಾಗಿ ಯುವ ಕಾಂಗ್ರೆಸ್ ವತಿಯಿಂದ ‘ನಮ್ಮ ನೆರೆ ನಮ್ಮ ಹೊಣೆ’ ಆಂದೋಲನ ನಡೆಸಲಾಗುವುದು. ನಮ್ಮ ತೆರಿಗೆಯ ಹಣದಲ್ಲಿ ನಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ಭರಿಸಬೇಕಾಗಿದೆ. ನಾಗರಿಕರ ಜೀವದ ಹೊಣೆ ಸರ್ಕಾರದ್ದಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ನೇರ ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರೀಲ್ ರೇಗೋ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸೂತ್ರಬೆಟ್ಟು ಜಗನ್ನಾಥ ರೈ, ಫಾರೂಕ್ ಬಯಬ್ಬೆ, ರವಿಪ್ರಸಾದ್ ಶೆಟ್ಟಿ, ಮಂಗಳೂರು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ದೇವಾಡಿಗ, ನಗರಸಭಾ ಸದಸ್ಯ ರಾಬಿನ್ ತಾವ್ರೋ, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ನಿಖಿಲ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.