ಪತ್ರಕರ್ತರಿಗೆ ಮಾಸ್ಕ್-ಸ್ಯಾನಿಟೈಸರ್ ವಿತರಣೆ

ಮೈಸೂರು:ಏ:19: ಸರ್ಕಾರವು ಮೈಸೂರಿನಲ್ಲಿ ಸರ್ಕಾರಿ ಶಾಲೆ ಅಥವಾ ಸರ್ಕಾರಿ ಕಛೇರಿಗಳಲ್ಲಿ ಸ್ಥಳಾವಕಾಶ ಮಾಡಿಕೊಟ್ಟಲ್ಲಿ ಅಲ್ಲಿ ಕೋವಿಡ್‍ನಿಂದ ಬಳಲುತ್ತಿರುವವರಿಗೆ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಸುಜೀತ್ ಫೌಂಡೇಶನ್ ಅಧ್ಯಕ್ಷ ರಾಜಾರಂ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರಿಗೆ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ, ಜನತೆಗೆ ನೈಜ್ಯ ಸ್ಥಿತಿಯನ್ನು ತಿಳಿಸುವವರು ಪತ್ರಕರ್ತರು ಅವರ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು. ಪತ್ರಕರ್ತರು ಇತರೆ ಕೊರೊನಾ ವಾರಿಯಾರ್ಸ್‍ಗಿಂತ ಕಡಿಮೆ ಏನಲ್ಲ. ಅವರನ್ನು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಇದನ್ನು ಮನಗಂಡ ನಮ್ಮ ಸಂಸ್ಥೆಯು ಅವರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಸಲುವಾಗಿ ತಮ್ಮ ಸಂಘದ ವತಿಯಿಂದ ಕೊರೊನಾ ಅಲೆ ಮುಗಿಯುವ ವರೆಗೂ ಪತ್ರಕರ್ತರಿಗೆ ಉಚಿತವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್‍ಗಳನ್ನು ವಿತರಿಸಲಾಗುವುದೆಂದು ಘೋಷಿಸಿದರು.
ನಗರದಲ್ಲಿ ಇತ್ತೀಚೆಗೆ ಕೋವಿಡ್ ಮಹಾಮಾರಿಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ.
ಇದನ್ನು ಮನಗಂಡ ನಮ್ಮ ಸಂಸ್ಥೆಯು ನಗರದ ಯುವ ಬ್ರಾಹ್ಮಣ ವೇದಿಕೆ ಮತ್ತು ಕರ್ನಾಟಕ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರುಗಳೊಂದಿಗೆ ಚರ್ಚಿಸಿ ರೋಗಿಗಳ ಆರೋಗ್ಯ ಸುಧಾರಿಸುವ ದೃಷ್ಟಿಯಿಂದ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಸ್ಥಳಾವಕಾಶ ಕಲ್ಪಿಸಿದ್ದಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡುವುದಾಗಿ ಹೇಳಿದ ಅವರು ಸರ್ಕಾರಕ್ಕೆ ಮೈಸೂರಿನಲ್ಲಿ ಪಾಠಶಾಲೆ ಅಥವಾ ಸರ್ಕಾರಿ ಕಛೇರಿಗಳಲ್ಲಿ ಹೇಳಿದ ಅವರು, ಈ ದಿಸೆಯಲ್ಲಿ ಇಂದೇ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಈ ದಿಸೆಯಲ್ಲಿ ಪತ್ರಕರ್ತರು ತಮ್ಮೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಬೆಂಗಳೂರಿನಂತೆ ಮೈಸೂರಿನಲ್ಲಿಯೂ ಕೊರೊನಾ ವೈರಸ್‍ನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ದಿಸೆಯಲ್ಲಿ ಸಾರ್ವಜನಿಕರು ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಬಹಳಾ ಮುಖ್ಯ ಎಂಬುದನ್ನು ಅರ್ಥೈಸಿಕೊಂಡು ಹೊರ ಬರುವಾಗ ಮುಖಕ್ಕೆ ಮಾಸ್ಕ್‍ನನ್ನು ಕಡ್ಡಾಯವಾಗಿ ಧರಿಸುವುದು ಮತ್ತು ಹೊರಗಿನಿಂದ ಮನೆಗೆ ಬಂದ ನಂತರ ಸ್ಯಾನಿಟೈಸರ್‍ನಿಂದ ಕೈ-ಮುಖವನ್ನು ವರೆಸಿಕೊಂಡಲ್ಲಿ ಈ ರೋಗವನ್ನು ಕೊಂಚ ಮಟ್ಟಿಗೆ ತಡೆಗಟ್ಟಲು ಸಾಧ್ಯ ಎಂದರು.
ಪತ್ರಕರ್ತರು ಇತರೆ ಕೊರೊನಾ ವಾರಿಯರ್ಸ್‍ಗಿಂತ ಹೆಚ್ಚಿನ ಕೆಲಸ ಮಾಡುತ್ತಿದ್ದು, ಅವರ ಆರೋಗ್ಯ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿಡುವ ಸಲುವಾಗಿ ಇಂದು ರಾಜಾರಾಂರವರು ಇಂದು ಸಂಘದ ಎಲ್ಲಾ ಸದಸ್ಯರಿಗೂ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್‍ನನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ರಾಜಾರಂರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮತ್ತು ಸಾಂಕೇತಿಕವಾಗಿ ಕೆಲವು ಪತ್ರಕರ್ತರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‍ನನ್ನು ವಿತರಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ, ಉಪಾಧ್ಯಕ್ಷ ಬಸವಣ್ಣ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ನಗರ ಕಾರ್ಯದರ್ಶಿ ರಂಗಸ್ವಾಮಿ ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.