ಪತ್ರಕರ್ತರಿಗೆ ಕಲ್ಯಾಣ ಕಾರ್ಯಕ್ರಮ ರೂಪಿಸಲು ಆಗ್ರಹ

ಕೋಲಾರ, ಮೇ.೩:ಸರ್ಕಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕಾರ್ಮಿಕ ಇಲಾಖೆ ವತಿಯಿಂದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಒತ್ತಾಯಿಸಿದರು.
ಸೋಮವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕಾರ್ಮಿಕ ಕಾಯ್ದೆಯಡಿ ನೋಂದಾಯಿಸಲಾಗಿದೆ. ಇದು ಮೂಲತ: ಕಾರ್ಮಿಕ ಸಂಘಟನೆಯಾಗಿದ್ದರೂ ಸಹ ಇದುವರೆಗೂ ಕಾರ್ಮಿಕ ಇಲಾಖೆಯಿಂದ ಯಾವುದೇ ಸೌಕರ್ಯಗಳನ್ನು ಕಾರ್ಯನಿರತ ಪತ್ರಕರ್ತರಿಗೆ ಒದಗಿಸದೇ ಇರುವುದು ವಿಷಾಧಕರ ಎಂದು ಹೇಳಿದರು.
ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಪ್ರಶ್ನಿಸಿದರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸಲಾಗುತ್ತದೆ. ಆದರೆ ವಾರ್ತಾ ಇಲಾಖೆಯು ಕೇವಲ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತ ಸೌಕರ್ಯಗಳನ್ನು ಒದಗಿಸುತ್ತಿದೆ. ಇದರಿಂದ ಬಹುಸಂಖ್ಯಾತ ಕಾರ್ಯನಿರತ ಪತ್ರಕರ್ತರು ಯಾವುದೇ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದಾರೆ.
ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಸಿ.ವಿ.ನಾಗರಾಜ್, ಪತ್ರಕರ್ತರು ಕಾರ್ಮಿಕರೇ ಎಂಬ ಪ್ರಶ್ನೆ ಇದೆ. ನಾವೆಲ್ಲಾ ಪತ್ರಿಕಾ ಮನೆಯಲ್ಲಿ ಕೆಲಸ ಮಾಡುವ ಕಾರ್ಯನಿರತ ಪತ್ರಕರ್ತರು. ೧೯೪೭ರ ಕಾಯ್ದೆ, ೧೯೫೫ರ ಕಾಯ್ದೆ ಪ್ರಕಾರ ಪತ್ರಿಕಾ ಕಚೇರಿಯ ಸಹಾಯಕರು, ತಂತ್ರಜ್ಞರು ಕೂಡ ಕಾರ್ಯನಿರತ ಪತ್ರಕರ್ತರು. ಪತ್ರಕರ್ತರಿಂದ ದಿನಕ್ಕೆ ೫ರಿಂದ ೬ ಗಂಟೆ ಮಾಡಿಸಬೇಕು ಎಂಬುದಿದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿದರು. ಪತ್ರಕರ್ತರು ಪರಿಪೂರ್ಣ ಕಾರ್ಮಿಕರೇ ಅಥವಾ ಅಸಂಘಟಿತ ಕಾರ್ಮಿಕರೇ ಎಂಬುದು ಗೊತ್ತಿಲ್ಲ. ಪತ್ರಕರ್ತರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು. ಸಂಘಟಿತ ಹೋರಾಟ ನಡೆಸಿದರೆ ಸರ್ಕಾರದ ಗಮನ ಸೆಳೆಯಬಹುದು. ಕಾರ್ಮಿಕರ ಹಕ್ಕು ಹಾಗೂ ರಕ್ಷಣೆ ಬೇಕಿದೆ ಎಂದರು.
ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಬಿ.ಸುರೇಶ್, ಅಬ್ಬಣಿಶಂಕರ್, ಓಂಕಾರಮೂರ್ತಿ, ವೆಂಕಟೇಶ ಬಾಬಾ, ಎಸ್.ಸೋಮಶೇಖರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಾ.ಮಂಜುನಾಥ್, ಆಸೀಫ್‌ಪಾಷ, ಎನ್.ಗಂಗಾಧರ, ಗೋಪಿ, ಎಲ್.ಕಿರಣ್, ಸರ್ವಜ್ಞಮೂರ್ತಿ, ಸಿಅಮರೇಶ್ ಉಪಸ್ಥಿತರಿದ್ದರು. ಕೋ.ನಾ.ಪ್ರಭಾಕರ್ ಪ್ರಾರ್ಥಿಸಿ, ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ್ ಸ್ವಾಗತಿಸಿದರು.