ಪತ್ರಕರ್ತರಿಗೆ ಉಡುಗೊರೆ ಸಮಗ್ರ ತನಿಖೆಗೆ ಎಚ್. ವಿಶ್ವನಾಥ್ ಒತ್ತಾಯ

ಮೈಸೂರು: ಅ.31:- ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿ ಹಬ್ಬದ ವೇಳೆ ಪತ್ರಕರ್ತರಿಗೆ ಶುಭ ಕೋರುವ ನೆಪದಲ್ಲಿ ಸಿಹಿ ತಿಂಡಿಯ ಪ್ಯಾಕೆಟ್ ಜೊತೆ ಹಣ ಇರಿಸಿದ್ದ ಪ್ಯಾಕೆಟ್ ನೀಡಿದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ನಡೆಸಬೇಕು. ಇದಕ್ಕೆ ಕಾರಣರಾದ ಕಚೇರಿ ಅಧಿಕಾರಿ ಹಾಗೂ ಸಂಬಂಧಿತ ಸಚಿವರನ್ನು ಕಿತ್ತೊಗೆಯಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಆಗ್ರಹಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ರಾಜ್ಯದ ಪತ್ರಕರ್ತರಿಗೂ ಒಳ್ಳೆಯ ಹೆಸರಿದೆ. ಆದರೆ ಈ ಅಂಗವನ್ನೇ ಭ್ರಷ್ಟಗೊಳಿಸಹೊರಟಿರುವುದ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜೊತಗೆ, ಜನಪ್ರತಿನಿಧಿಗಳು ಜನ ಸಮುದಾಯದ ಎದುರು ವಿಶ್ವಾಸರ್ಹತೆ, ಗೌರವ ಕಳೆದುಕೊಳ್ಳುತ್ತಿದ್ದಾರೆ. ಮಾಧ್ಯಮದವರನ್ನೂ ಇದೇ ರೀತಿ ಮಾಡುವುದು ಸರಿಯಲ್ಲ. ಸಿಎಂ ಕಚೇರಿ ಕಾರ್ಯದರ್ಶಿ ಮನೆಯಿಂದಲೇ ಹಣ ಪತ್ರಕರ್ತರಿಗೆ ನೀಡಲಾಗಿದೆ ಎಂಬುದು ಗಂಭೀರ ವಿಷಯವಾಗಿದೆ. ಜೊತೆಗೆ ಇದಕ್ಕೆ ಮಂತ್ರಿಯೊಬ್ಬರು ಕಾರಣ ಎಂಬ ಮಾತು ಸಹಾ ಕೇಳಿಬಂದಿದೆ.
ಈ ಕುರಿತು ಸಿಎಂ ಮಾತನಾಡಬೇಕು, ಇದು ಉದ್ದೇಶಪೂರ್ವಕವಾಗಿ ಮಾಧ್ಯಮದವರಿಗೆ ಉಡುಗೊರೆ ನೆಪದಲ್ಲಿ ಲಂಚ ನೀಡಿದ ಘಟನೆಯಾಗಿದೆ. ಈ ವೇಳೆ ಈ ಹಿಂದೆ ಕಾಂಗ್ರೆಸ್‍ನವರೂ ಇದನ್ನೇ ಮಾಡಿದರು ಎಂಬ ಸಮರ್ಥನೆ ಸರಿಯಲ್ಲ. ಒಬ್ಬರು ತಪ್ಪು ಮಾಡಿದರೆಂದು ನಾವೂ ತಪ್ಪು ಮಾಡುತ್ತೇವೆ ಎನ್ನುವುದು ಎಷ್ಟು ಸರಿ ಎಂದು ಕೇಳಿದರು.
ಹೀಗಾಗಿ ಈ ಘಟನೆಯಲ್ಲಿ ಪಾಲ್ಗೊಂಡಿರುವ ಸಚಿವರಿಗೆ ಮೊದಲು ಗೇಟ್‍ಪಾಸ್ ನೀಡಬೇಕು. ಸಂಬಂಧಿತ ಅಧಿಕಾರಿಯನ್ನು ಕಿತ್ತೊಗೆಯಬೇಕು. ಅಂತಹವರನ್ನು ಇರಿಸಿಕೊಂಡು ಸಿಎಂ ತಮ್ಮ ಹೆಸರು ಹಾಳು ಮಾಡಿಕೊಳ್ಳುವುದು ಬೇಡ ಎಂದು ತಾಕೀತು ಮಾಡಿದರು.