ಪತ್ನಿ ಹತ್ಯೆ ಪತಿ ಬಂಧನ

ತುಮಕೂರು, ನ. ೧೫- ತವರು ಮನೆಗೆ ಹೋಗಿ ಬರುವ ವಿಚಾರಕ್ಕೆ ನಡೆದ ಜಗಳದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಪೊಲೀಸರು ಬಂಧಿಸಿದ್ದಾರೆ. ಗುಬ್ಬಿ ತಾಲ್ಲೂಕು ಮಂಚಿಹಳ್ಳಿಯ ಈಶ್ವರಯ್ಯ ಎಂಬಾತನೇ ಬಂಧಿತ ಆರೋಪಿ. ಕಳೆದ ಒಂದೂವರೆ ವರ್ಷದ ಹಿಂದೆ ಹೆಂಡತಿ ವಸಂತಮ್ಮ ತವರು ಮನೆಗೆ ಹೋಗಿದ್ದ ವಿಚಾರಕ್ಕೆ ಜಗಳವಾಡಿದ್ದು, ಈ ವೇಳೆ ಕುತ್ತಿಗೆಗೆ ಮಚ್ಚು ಬೀಸಿದ್ದ, ತೀವ್ರವಾಗಿ ರಕ್ತಸ್ರಾವವಾಗಿದ್ದ ವಸಂತಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಹೆಂಡತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಈಶ್ವರಯ್ಯ ಸಿಟ್ಟಿನಲ್ಲೇ ಬೈಕ್‌ನೊಂದಿಗೆ ಪರಾರಿಯಾಗಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿ.ಎಸ್. ಪುರ ಠಾಣೆ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು. ಕಳೆದ ಒಂದೂವರೆ ವರ್ಷದಿಂದ ವಸಂತನರಾಸಪುರ ಕೈಗಾರಿಕಾ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಈಶ್ವರಯ್ಯ, ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸಿಪಿಐ ಗೋಪಿನಾಥ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವಕುಮಾರ್, ಎಎಸ್‌ಐ ರಾಮಚಂದ್ರಪ್ಪ, ಪೇದೆಗಳಾದ ಮಧುಸೂದನ್, ಮೊಹಮ್ಮದ್ ಖಲಂದರ್ ಅವರ ತಂಡ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.