ಪತ್ನಿ ಸಾವಿಗೆ ಕಾರಣವಾದ ಪತಿ ಸಾಲ

ಸಂಜೆವಾಣಿ ವಾರ್ತೆ

ಚಿತ್ರದುರ್ಗ,ಮಾ.20:  ಸಾಲ ಕೊಟ್ಟವರ ಕಾಟ ತಾಳಲಾರದೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ಮಂಗಳವಾರ ರಾತ್ರಿ ಹೊಳಲ್ಕೆರೆಯ ಬಸವ ಲೇಔಟ್ ನಲ್ಲಿ ನಡದಿದೆ.ಹೊಳಲ್ಕೆರೆಯ ಬಸವ ಲೇಔಟ್ ನಿವಾಸಿ ರಂಜಿತಾ(23) ಆತ್ಮಹತ್ಯೆಗೆ ಶರಣಾದ ಮಹಿಳೆ.ರಂಜಿತಾ ಕಳೆದ ಐದು ವರ್ಷಗಳ ಹಿಂದೆ  ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ ದರ್ಶನ್ ಬಾಲು ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಒಂದು ಗಂಡು ಮಗು ಇದ್ದು ಸುಖ ಸಂಸಾರ ನಡೆಸುತ್ತಿದ್ದರು.ಆದರೆ ದರ್ಶನ್ ಬಾಲು ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಸರ್ಕಾರಿ ಕೆಲಸದಲ್ಲಿದ್ದರೂ ಸಹ ಖಾಸಗಿಯಾಗಿ ಸುಮಾರು 1 ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಐಪಿಎಲ್ ಬೆಟ್ಟಿಂಗ್ ಗಾಗಿ ಚಟವೇ ಇಷ್ಟೊಂದು ಮೊತ್ತದ ಸಾಲ ಮಾಡಲು ಕಾರಣ ಎಂದು ಹೇಳಲಾಗುತ್ತಿದೆ. ಸಾಲವನ್ನು ಮೀಟ‌ರ್ ಬಡ್ಡಿ ಲೆಕ್ಕದಲ್ಲಿ ಪಡೆದಿದ್ದು, ಸಾಲ ಕೊಟ್ಟವರು ಬಡ್ಡಿ ಹಾಗೂ ಅಸಲನ್ನು ವಾಪಸ್ ಕೊಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಸಾಲ ಕೊಟ್ಟವರು ಹಣಕ್ಕಾಗಿ ಮನೆಯ ಹತ್ತಿರ ಬಂದು ಪತಿ, ಪತ್ನಿ ಇಬ್ಬರನ್ನೂ ಪೀಡಿಸುತ್ತಿದ್ದರು. ಇದರಿಂದ ಮನನೊಂದು ರಂಜಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಂಶಯ ವ್ಯಕ್ತವಾಗಿದೆ‌. ನನ್ನ ಪತ್ನಿ ಸಾವಿಗೆ ಸಾಲ ಕೊಟ್ಟವರೇ ಕಾರಣ ಎಂದು ರಂಜಿತಾ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.