ಪತ್ನಿ, ಸಹೋದರ ಆಸ್ಪತ್ರೆಯಲ್ಲಿ: ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ತ್ರಿಶಂಕು ಸ್ಥಿತಿ

ಕಲಬುರಗಿ,ಮೇ.4: ಪತ್ನಿ ಹಾಗೂ ಸಹೋದರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರ ಮಧ್ಯೆಯೂ ಚಿತ್ತಾಪುರ ಮೀಸಲು ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರು ತಮ್ಮ ಪರ ಪ್ರಚಾರವನ್ನು ಒತ್ತಡಗಳ ಮಧ್ಯೆ ಮಾಡುವಂತಾಗಿದೆ.
ಒಂದು ಕಡೆ ಸಹೋದರ, ಇನ್ನೊಂದು ಕಡೆಗೆ ಪತ್ನಿ ಆಸ್ಪತ್ರೆಯಲ್ಲಿ ಇರುವಾಗ ಅವರಿಗೆ ಭೇಟಿ ಮಾಡಿ, ಮತ್ತೊಮ್ಮೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುವಂತಹ ತ್ರಿಶಂಕು ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶ್ರೀಮತಿ ಶೃತಿ ಖರ್ಗೆಯವರು ಬ್ರೇನ್ ಟ್ಯೂಮರ್‍ನಿಂದ ಬಳಲುತ್ತಿದ್ದು, ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ. ಪತ್ನಿ ಅಲ್ಲದೇ ಸಹೋದರ ರಾಹುಲ್ ಅವರೂ ಸಹ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪತ್ನಿ ಮತ್ತು ಸಹೋದರನ ಆರೋಗ್ಯ ವಿಚಾರಣೆಗಾಗಿ ಪ್ರಿಯಾಂಕ್ ಖರ್ಗೆ ಅವರು ಒಂದು ದಿನ ಆಸ್ಪತ್ರೆಗೆ ತೆರಳಿದರೆ, ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.