ಪತ್ನಿ ವರ್ಗಾವಣೆಗೆ ಪತಿ ಸಿಎಂಗೆ ಮನವಿ

ಕೋಲಾರ, ಆ,೧೯-ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿರುವ ನನ್ನ ಆರೋಗ್ಯ ದೃಷ್ಟಿಯಿಂದ ಹಾಗೂ ನನ್ನ ೬ ವರ್ಷದ ಮಗಳ ವಿದ್ಯಾಭ್ಯಾಸ ದೃಷ್ಟಿಯಿಂದ ಮತ್ತು ನನ್ನ ವೃದ್ಧ ತಂದೆ ತಾಯಿಯವರ ಸೇವೆ ಮಾಡಲು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕವಿತಾಳ್‌ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜೆಡ್.ಪರ್ವೀನ್‌ತಾಜ್‌ರನ್ನು ಕೋಲಾರ ತಾಲ್ಲೂಕಿಗೆ ವರ್ಗಾವಣೆ ಮಾಡುವಂತೆ ಸಿಎಂ ಹಾಗೂ ಶಿಕ್ಷಣ ಸಚಿವರಲ್ಲಿ ಮತ್ತು ಶಿಕ್ಷಣ ಇಲಾಖೆ ಕಮೀಷನರ್‌ರಲ್ಲಿ ಮುಳಬಾಗಿಲಿನ ಮೊಹಮದ್ ಸನಾವುಲ್ಲಾ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿ, ನನ್ನ ಧರ್ಮಪತ್ನಿ ಕಳೆದ ೨೦೦೭ ರಿಂದ ರಾಯಚೂರು ಜಿಲ್ಲೆಯಲ್ಲಿ ೧೫ ವರ್ಷ ನಿರಂತರವಾಗಿ ಶಿಕ್ಷಕಿಯಾಗಿ ಹಾಗೂ ಹೆಚ್ಚುವರಿ ಶಿಕ್ಷಕರಾಗಿ ಉರ್ದು ಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದು, ಸರ್ಕಾರದ ಆದೇಶ ಹಾಗೂ ಹೊಸ ತಿದ್ದುಪಡಿ ಕಾಯ್ದೆ ಅನುಗುಣವಾಗಿ ಹೆಚ್ಚವರಿ ಶಿಕ್ಷಕರು ೩ ವರ್ಷ ವರ್ಗಾವಣೆಗೆ ಅರ್ಹರಲ್ಲ ಎಂಬ ಕಾರಣಕ್ಕಾಗಿ ನನ್ನ ಪತ್ನಿಗೆ ಅನ್ಯಾಯವಾಗಿದ್ದು ಇದರಿಂದ ನನ್ನ ಪತ್ನಿ ಹಾಗೂ ಕುಟುಂಬ ಶಿಕ್ಷೆ ಅನುಭವಿಸುವಂತಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಆದ್ಯತೆ ಮೇರೆಗೆ ನನ್ನ ಪತ್ನಿ ವರ್ಗಾವಣೆ ಕೋರಿದ್ದು, ಒಂದೇ ತಾಲ್ಲೂಕಿನಲ್ಲಿ ೧೦ ವರ್ಷ ಸೇವೆ ಪೂರ್ತಿಯಾಗಿಲ್ಲವೆಂಬ ಕಾರಣಕ್ಕೆ ಅರ್ಜಿ ತಿರಸ್ಕೃತ ವಾಗಿರುತ್ತದೆ. ಆದರೆ ಒಂದೇ ಜಿಲ್ಲೆಯಲ್ಲಿ ನಿರಂತರವಾಗಿ ೧೫ ವರ್ಷ ಸೇವೆ ಸಲ್ಲಿಸಿದ್ದರೂ ವರ್ಗಾವಣೆ ಆಗದ ಕಾರಣ ನನ್ನ ಪತ್ನಿ ಹತಾಶೆ ಕೊಂಡಿರುವುದಲ್ಲದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆಂದು ವಿವರಿಸಿದರು.
ಶಿಕ್ಷಕರ ಸಂಘಕ್ಕೆ, ಶಿಕ್ಷಣ ಸಚಿವರಿಗೆ, ಶಿಕ್ಷಣ ಇಲಾಖೆ ಕಮೀಷನರ್‌ರಿಗೆ, ಜಿಲ್ಲಾಧಿಕಾರಿ ಹಾಗೂ ಕೋಲಾರ ಮತ್ತು ಮುಳಬಾಗಿಲು ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ, ನನ್ನ ಮನವಿ ಪುರಸ್ಕರಿಸಿ ನನ್ನ ಪತ್ನಿಯನ್ನು ವರ್ಗಾವಣೆ ಮಾಡದ್ದಿದ್ದರೆ ಮಂದಿನ ತಿಂಗಳ ೫ ಶಿಕ್ಷಕರ ದಿನಾಚರಣೆಯ ದಿನದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಮೊಹಮದ್ ಸನಾವುಲ್ಲಾರ ತಂದೆ ನಿವೃತ್ತ ಶಿಕ್ಷಕ ಅಬ್ದುಲ್ ಬಷೀರ್, ತಾಯಿ ಹಾಗೂ ಮಗಳು ಇದ್ದರು.