ಪತ್ನಿ ಜತೆ ಜಗಳವಾಡಿ ಮಗು ಸಾಯಿಸಿದ ಪಾಪಿ ಪತಿ

ಸಿದ್ದಿಪೇಟ್, ತೆಲಂಗಾಣ, ಡಿ.೪ – ಪತ್ನಿಯೊಂದಿಗೆ ಜಗಳವಾಡಿದ ಪತಿ ತನ್ನ ೧೧ ತಿಂಗಳ ಹೆಣ್ಣು ಮಗುವಿಗೆ ವಿದ್ಯುತ್ ಹರಿಸಿ ಕೊಂದಿರುವ ಅಮಾನವೀಯ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ನಡೆದಿದೆ.
ಸಿದ್ದಿಪೇಟ್ ಜಿಲ್ಲೆಯ ವೆಂಕಟರಾವುಪೇಟ ಎಂಬಲ್ಲಿ ಈ ಘಟನೆ ನಡೆದಿದೆ. ರಾಜಶೇಖರ ಎಂಬಾತ ತನ್ನ ಪತ್ನಿ ಸುನೀತಾಳೊಂದಿಗೆ ಜಗಳವಾಡಿದ ನಂತರ ಮಗುವನ್ನು ಹೊಲಕ್ಕೆ ಎತ್ತೊಯ್ದು ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ. ಇದಷ್ಟೇ ಅಲ್ಲದೇ ಕೀಟನಾಶಕ ಸೇವಿಸಿ, ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಾನೆ.
ತಂದೆ ರಾಜಶೇಖರನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆತ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಮತ್ತೊಬ್ಬ ರೈತನಿಗೆ ಕರೆ ಮಾಡಿ, ಇದೇ ನನ್ನ ಕೊನೆಯ ಕರೆ ಎಂದು ಹೇಳಿದ್ದಾನೆ.
ಇನ್ನು ರಾಜಶೇಖರ ಸುನೀತಾಳನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.