ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

ಮಧುಗಿರಿ, ನ. ೨೫- ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ೬೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
೨೦೧೪ರ ಸೆಪ್ಟೆಂಬರ್ ೨ ರಂದು ಕೊರಟಗೆರೆ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವರ ಮನೆಗೆ ಬೆಂಗಳೂರು ಸಮೀಪದ ಮಾರಸಂದ್ರ ಗ್ರಾಮದ ಹರೀಶ್ (೩೪) ತನ್ನ ಪತ್ನಿ ಗಾಯತ್ರಿ ಅವರೊಂದಿಗೆ ಗೌರಿ ಹಬ್ಬಕ್ಕೆ ಬಂದಿದ್ದರು.
ಪತ್ನಿಯ ನಡತೆ ಮೇಲೆ ಅನುಮಾನಗೊಂಡ ಪತಿ ಹರೀಶ್ ಅಂದು ರಾತ್ರಿ ಚಾಕುವಿನಿಂದ ಇರಿದು ಗಾಯತ್ರಿ ಅವರನ್ನು ಕೊಲೆ ಮಾಡಿದ್ದರು. ಪೊಲೀಸರ ತನಿಖೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ಆರೋಪಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ ಅವರು ಆರೋಪಿಗೆ ಈ ಮೇಲಿನಂತೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.