ಪತ್ನಿ, ಆಳಿನಿಂದಲೇ ಅಂಗಡಿ ಮಾಲೀಕನ ಕೊಲೆ

ಬೆಂಗಳೂರು, ಜ.೧೨- ಮನೆಯ ಕೆಲಸಕ್ಕಿದ್ದ ಕೂಲಿಯಾಳಿನ ಜೊತೆ ಅಕ್ರಮ ಸಂಬಂಧ ಬೆಳಸಿ ಪತಿಯನ್ನು ಕೊಲೆಗೈದು ಚೀಲದಲ್ಲಿ ಕಟ್ಟಿ ಕಸದ ಗುಂಡಿಗೆ ಎಸೆದಿದ್ದ ಪತ್ನಿ ೭ ತಿಂಗಳ ಬಳಿಕ ಮಾದನಾಯ್ಕನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಮಾದನಾಯ್ಕನಹಳ್ಳಿಯ ತೋಟದಗುಡ್ಡದ, ಶಿವಲಿಂಗು ಕೊಲೆಗೈದ ಪತ್ನಿ ಶೋಭಾ ಕೆಲಸದಾಳು ರಾಮುನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಘಟನೆ ಹಿನ್ನೆಲೆ: ಕುಣಿಗಲ್ ತಾಲೂಕು ಬಿ.ಹೊಸಹಳ್ಳಿ ಮೂಲದ ಶಿವಲಿಂಗು ತೋ
ಟದಗುಡ್ಡದ ಹಳ್ಳಿಯಲ್ಲಿ ವಾಸವಿದ್ದು ಬಾರ್‌ವೊಂದರ ಮುಂದೆ ಕಬಾಬ್ ಅಂಗಡಿ ನಡೆಸುತ್ತಿದ್ದ. ಈ ವೇಳೆ ರಾಮು ಎಂಬ ಅನಾಥನ ಪರಿಚಯವಾಗಿದೆ. ಆತನಿಗೂ ಬದುಕು ನೀಡಿದಂತೆ ಆಗುತ್ತದೆ, ತನಗೂ ಸಹಾಯವಾಗುತ್ತದೆ ಎಂದು ಶಿವಲಿಂಗು ಆತನಿಗೆ ಆಶ್ರಯ ನೀಡಿದ್ದಾನೆ. ಶಿವಲಿಂಗು ಮತ್ತು ಶೋಭಾ ಕಳೆದ ೧೬ ವರ್ಷಗಳಿಂದ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದರು.
ಕುಡಿತದ ಚಟ: ಇತ್ತೀಚೆಗೆ ಶಿವಲಿಂಗುವಿನ ಕುಡಿತದ ಚಟದಿಂದ ಶೋಭಾ ರೋಸಿ ಹೋಗಿದ್ದಳು. ಗಂಡನ ಕುಡಿತ ರಾಮುವಿನ ಗೆಳೆತನಕ್ಕೆ ದಾರಿ ಮಾಡಿತು. ಮುಂದೆ ಈ ಗೆಳೆತನ ಇಬ್ಬರ ನಡುವೆ ಅಕ್ರಮ ಸಂಬಂಧವಾಗಿ ಏರ್ಪಟ್ಟಿತ್ತು. ಆರು ತಿಂಗಳ ಹಿಂದೆ ಕೆಲಸ ಮುಗಿಸಿ ಕುಡಿದು ಮನೆಗೆ ಬಂದಿದ್ದ ಶಿವಲಿಂಗು ಪತ್ನಿ ಜೊತೆ ಕ್ಷುಲ್ಲಕ ವಿಷಯಕ್ಕೆ ತೆಗೆದ ಜಗಳ ವಿಕೋಪಕ್ಕೆ ತಿರುಗಿದೆ.
ಆಕ್ರೋಶಗೊಂಡ ಶೋಭಾ ಮತ್ತು ರಾಮು ಇಬ್ಬರು ಸೇರಿ ಮನಸೋ ಇಚ್ಛೆ ಶಿವಲಿಂಗುವನ್ನು ಥಳಿಸಿ, ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾರೆ. ಬಳಿಕ ಆತನ ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಯಾರಿಗೂ ಅನುಮಾನ ಬರಬಾರದು ಎಂದು ರಾತ್ರೋ ರಾತ್ರಿ ಶವದ ಕೈಕಾಲು ಮುರಿದು ಮೂಟೆ ಕಟ್ಟಿ ಕೋಳಿ ತ್ಯಾಜ್ಯ ಸೇರಿದಂತೆ ಗೃಹಪಯೋಗಿ ತ್ಯಾಜ್ಯ ಎಸೆಯುವ ಕಸದ ಗುಂಡಿಗೆ ಮೃತ ದೇಹ ಎಸೆದಿದ್ದಾರೆ.
ಸಾಕ್ಷ್ಯನಾಶ ಯತ್ನ: ಅದರ ಮೇಲೆ ಮತ್ತಷ್ಟು ಕಸ ಸುರಿದು ಸಾಕ್ಷ್ಯನಾಶ ನಡೆಸಿದ್ದಾರೆ. ಇದಾಗಿ ಸರಿಯಾಗಿ ೭ ದಿನದ ನಂತರ ಅಂದರೆ ೨೦೨೦ರ ಜೂನ್ ೭ ರಂದು ಚಿಂದಿ ಆಯುವವರಿಗೆ ಶವ ಪತ್ತೆಯಾಗಿದೆ. ಆದರೆ, ಮೃತದೇಹದ ಗುರುತು ಪತ್ತೆಯಾಗದ ರೀತಿ ಕೊಳೆತು ನಾರುತ್ತಿದ್ದರಿಂದ ಅಪರಿಚಿತ ಶವವೆಂದು ದೂರು ದಾಖಲಿಸಿಕೊಂಡ ಪೊಲೀಸರು ಅಲ್ಲಿಯೇ ಶವಸಂಸ್ಕಾರ ಮಾಡಿ ಮುಗಿಸಿದ್ದರು.
ಶಿವಲಿಂಗು ನೋವು: ಪತ್ನಿ ಹಾಗೂ ಕೆಲಸದಾಳುವಿನ ನಡುವಿನ ಚಕ್ಕಂದ ನೋಡಿ ನೊಂದಿದ್ದ ಮೃತ ಶಿವಲಿಂಗು ತನ್ನ ಸಹೋದರ ಹಾಗೂ ಪೋಷಕರ ಬಳಿ ಹೇಳಿಕೊಳ್ಳುತ್ತಿದ್ದ. ಆತನ ಸಹೋದರ ಪುಟ್ಟರಾಜು ಅಣ್ಣನಾದ ಶಿವಲಿಂಗುವಿಗೆ ಪೋನ್ ಮಾಡಿದ್ದಾನೆ ಪೋನ್ ಸ್ವೀಚ್ ಆಫ್ ಆಗಿದೆ, ಅತ್ತಿಗೆಗೆ ಫೋನ್ ಮಾಡಿದ್ದಾರೆ.
ನಿನ್ನ ಅಣ್ಣ ನಮ್ಮೊಂದಿಗೆ ಜಗಳ ಮಾಡಿಕೊಂಡು ಮನೆಯಲ್ಲಿದ್ದ ಒಂದು ಲಕ್ಷ ಹಣ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾರೆಂದು ಹೇಳಿದ್ದಾಳೆ. ಅಣ್ಣನ ಮನೆಗೆ ಬಂದ ಪುಟ್ಟರಾಜು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದರೂ ಒಪ್ಪದ ಆರೋಪಿ ಶೋಭಾ ದೂರು ಕೊಡುವುದು ಬೇಡ ಇಂದಲ್ಲ ನಾಳೆ ಬರಲಿದ್ದಾರೆ ಬಿಡಿ ಎಂದಿದ್ದಾಳೆ.
ಅತ್ತಿಗೆ ಮೇಲೆ ಶಂಕೆ
ಅತ್ತಿಗೆ ನಡೆ ಕಂಡು ಅನುಮಾನಗೊಂಡ ಪುಟ್ಟರಾಜು ಅಣ್ಣ ಕಾಣೆಯಾಗಿರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ಕಳೆದ ನವೆಂಬರ್ ನಲ್ಲಿ ದೂರು ನೀಡ ಅತ್ತಿಗೆಯ ಅಕ್ರಮ ಸಂಬಂಧದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಇಬ್ಬರನ್ನು ಠಾಣೆಗೆ ಕರೆದು ತಮ್ಮದೇ ದಾಟಿಯಲ್ಲಿ ವಿಚಾರಿಸಿದಾಗ ಕೊಲೆ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಅಪ್ಪ, ಅತ್ತೆ ಹಣಕ್ಕೆ ಕನ್ನ ಮಗ ಸೇರಿ ಮೂವರ ಸೆರೆ
ಬೆಂಗಳೂರು,ಜ.೧೨-ತಂದೆ ಹಾಗೂ ಅತ್ತೆಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್ ಕಳವು ಮಾಡಿ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿ ಹಣ ಡ್ರಾ ಮಾಡಿಕೊಂಡ ಮಗ ಹಾಗೂ ಅದಕ್ಕೆ ಸಹಕರಿಸಿದ ಇಬ್ಬರನ್ನು ರಾಮನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ತಾಲ್ಲೂಕಿನ ವಿದ್ಯಾಸಾಗರ್, ಶಶಿಕುಮಾರ್, ಚಲುವ ನಾರಾಯಣ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.ಆರೋಪಿಗಳಿಂದ ಎರಡು ಮೊಬೈಲ್ ಪೋನ್, ಒಂದು ಟಾಟಾ ಏಸ್, ೭.೯೦ ಲಕ್ಷ ನಗದು, ಪಾಸ್‌ಬುಕ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಒಟ್ಟು ಮೌಲ್ಯ ೯.೪೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮ್ಮ ತಂದೆ ಹಾಗೂ ಖಾತೆಯಲ್ಲಿ ಹೆಚ್ಚಿನ ಹಣ ಇರುವುದನ್ನು ಮನಗೊಂಡಿದ್ದ ಆರೋಪಿ ಚೆಲುವನಾರಾಯಣ ಈ ಖಾತೆಗಳಿಗೆ ಲಿಂಕ್ ಆಗಿದ್ದ ಸಿಮ್ ಕದ್ದು ನಕಲಿ ಮಾಡಿಕೊಂಡು ಅದನ್ನು ಇನ್ನಿತರ ಆರೋಪಿಗಳ ಮೊಬೈಲ್‌ಗೆ ಬಳಸಿ ಅದಕ್ಕೆ ಫೋನ್ ಪೇ ಆಯಪ್ ಹಾಕಿಕೊಂಡಿದ್ದರು. ಅದಕ್ಕೆ ಈ ಎರಡೂ ಬ್ಯಾಂಕ್ ಖಾತೆ ಲಿಂಕ್ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ನಂಬರ್ ಬದಲಾದ ಕಾರಣ ಇದು ಖಾತೆದಾರರ ಅರಿವಿಗೆ ಬಂದಿರಲಿಲ್ಲ. ಮೂರು ತಿಂಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ದೂರು ಆಧರಿಸಿ ತನಿಖೆ ನಡೆಸಿದ ಸೈಬರ್ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದರು ಎಂದು ಎಸ್ಪಿ ಮಾಹಿತಿ ನೀಡಿದರು.
ಕಾರು ಮಾರಿ ಕದ್ದರು
ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಿ, ಮತ್ತೆ ಕಾರಿನ ನಕಲಿ ಕೀ ಬಳಕೆ ಮಾಡಿ ಅದೇ ಕಾರನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕುಂಬಳಗೂಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕ್ರಾಂತಿ ಕಿರಣ್ ರೆಡ್ಡಿ, ನಾಗೇಶ್ವರ್ ರಾವ್, ಅರವಿಂದ್ ಬಂಧಿತರು. ಆರೋಪಿಗಳು ಇನೋವಾ ಕ್ರಿಸ್ಟಾ ಕಾರನ್ನು ವ್ಯಕ್ತಿಯೊಬ್ಬರಿಗೆ ಒಎಲ್‌ಎಕ್ಸ್ ಆಯಪ್ ಮೂಲಕ ಮಾರಿದ್ದರು. ಕಾರು ಮಾರಾಟವಾದ ಬಳಿಕ ನಕಲಿ ಕೀಬಳಕೆ ಮಾಡಿಕೊಂಡು ಕಳ್ಳತನ ಮಾಡಿ ಪರಾರಿಯಾಗಿದ್ದರು ಎಂದು ಎಸ್ಪಿ ತಿಳಿಸಿದರು.