
ಪಾಟ್ನಾ,ಮಾ.೧೨- ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೀಡಿರುವ ಸಮನ್ಸ್ ಪಡೆದಿರುವ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್, ಗರ್ಭಿಣಿ ಪತ್ನಿ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಸದ್ಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ನಿವಾಸದಲ್ಲಿಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ ವೇಳೆ ತೇಜಸ್ವಿ ಪ್ರಸಾದ್ ಹಾಗು ಅವರ ಅವರ ಪತ್ನಿ ರಾಜಶ್ರೀ ಯಾದವ್ ಕೂಡ ವಿಚಾರಣೆ ವೇಳೆ ಹಾಜರಿದ್ದರು. ಬಳಿಕ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಾರಿ ನಿರ್ದೇಶನಾಲಯ ಸುಮಾರು ೧೪ ಗಂಟೆಗಳ ಕಾಲ ನಿರಂತದ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಮಾನಸಿಕ ಕಿರುಕುಳಕ್ಕೆ ಒಳಗಾಗಿ ರಾಜಶ್ರೀ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗಾಗಿ ಸಿಬಿಐ ನೀಡಿರುವ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲು ಸಾಧ್ಯವಿಲ್ಲ ತೇಜಸ್ವಿ ಯಾದವ್ ಎಂದು ಹೇಳಿದ್ದಾರೆ.
ಮಾರ್ಚ್ ೪ ರಂದು ತೇಜಸ್ವಿ ಅವರಿಗೆ ಸಿಬಿಐ ಸಮನ್ಸ್ ನೀಡಿದ್ದರೂ ಸಹ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಆರ್‍ಜೆಡಿ ವಕ್ತಾರ ಚಿತ್ರಂಜನ್ ಗಗನ್ ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೇಜಸ್ವಿ ಅವರ ತಂದೆ, ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಅವರ ಪತ್ನಿ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ, ಅವರ ಹಿರಿಯ ಪುತ್ರಿ ಮಿಸಾ ಭಾರತಿ ಮತ್ತು ಇತರ ೧೩ ಮಂದಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದಡಿ ಭೂಮಿಗಾಗಿ ಭೂಮಿ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯಡಿ ತನಿಖೆ ನಡೆಯುತ್ತಿದೆ.ಮೂತ್ರಪಿಂಡ ಕಸಿ ನಂತರ ಫೆಬ್ರವರಿಯಲ್ಲಿ ಸಿಂಗಾಪುರದಿಂದ ಹಿಂದಿರುಗಿದ ಲಾಲು ವಿರುದ್ಧ ಮುಂದುವರಿಯಲು ಸಿಬಿಐ ಕೇಂದ್ರದಿಂದ ಪ್ರಾಸಿಕ್ಯೂಷನ್ ಅನುಮತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ವಿರುದ್ದ ವಾಗ್ದಾಳಿ
ಪುತ್ರ ತೇಜಸ್ವಿ ಮತ್ತು ಮೂವರು ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್ ಅವರ ಮನೆಗಳ ಮೇಲೆ ದಾಳಿ ಬಿಜೆಪಿ ಪಕ್ಷದ ಸೇಡಿನ ರಾಜಕೀಯ ಎಂದು ಆರ್ ಜೆ ಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ. ಹೆಣ್ಣುಮಕ್ಕಳು, ಪುಟ್ಟ ಮೊಮ್ಮಗಳು ಮತ್ತು ಗರ್ಭಿಣಿ ಸೊಸೆಯನ್ನು ಜಾರಿ ನಿರ್ದೇಶನಾಲಯವಿಚಾರಣೆಗೆ ಕೂರಿಸಿದೆ ಆಧಾರರಹಿತ, ಸೇಡಿನ ಪ್ರಕರಣಗಳಲ್ಲಿ ೧೫ ಗಂಟೆಗಳ ಕಾಲ ವಿಚಾರಣೆ ನಡೆಸಿರುವುದು ಬಿಜೆಪಿಯ ಕೀಳುಮಟ್ಟದ ರಾಜಕೀಯಕ್ಕೆ ತಾಜಾ ಉದಾಹರಣೆ ಎಂದು ವಾಗ್ದಾಳಿ ನಡೆಸಿದ್ದಾರೆ.