ಪತ್ನಿಯ ಹಣದ ದಾಹ ತಾಳದೇ ನೊಂದ ಪತಿ ಆತ್ಮಹತ್ಯೆ

ಬೆಂಗಳೂರು,ನ.16-ಪತ್ನಿಯ ಹಣದ ದಾಹ ಕಿರುಕುಳ ತಾಳಲಾರದೇ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹನುಮಂತನಗರದ ಶ್ರೀನಗರದಲ್ಲಿ ನಡೆದಿದೆ.
ಪತ್ನಿಯ ಕಾಟ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು ಶ್ರೀನಗರ ಬಳಿಯ ಅವಳಹಳ್ಳಿಯ ಮನೆಯಲ್ಲಿ ನೇಣಿಗೆ ಶರಣಾದ ಪತಿಯನ್ನು ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಎಂದು ಗುರುತಿಸಲಾಗಿದೆ.
ಬಾರ್ ಒಂದರಲ್ಲಿ ಕ್ಯಾಶಿಯರ್ ಆಗಿರುವ ಅಣ್ಣಯ್ಯ ಅವರು ಹೆಂಡತಿ ಕಾಟದಿಂದ ಬೇಸತ್ತು ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.
ಅಣ್ಣಯ್ಯ ಅವರಿಗೆ ಐದು ವರ್ಷದ ಹಿಂದೆ ಉಮಾ ಎಂಬಾಕೆಯ ಜತೆ ಮದುವೆಯಾಗಿತ್ತು. ಮದುವೆ ಬಳಿಕ ಹಣದ ವಿಚಾರಕ್ಕೆ ಸಂಬಂಧಿಸಿ ಗಂಡ ಹೆಂಡತಿ ಮಧ್ಯೆ ಯಾವಾಗಲೂ ಜಗಳ ಆಗುತ್ತಿತ್ತು. ಎಷ್ಟು ದುಡಿದರೂ ಹೆಂಡತಿ ದುಡ್ಡು-ದುಡ್ಡು ಎನ್ನುತ್ತಾಳೆ. ನಾನು ಎಷ್ಟು ದುಡಿದರೂ ಸಾಕಾಗುವುದಿಲ್ಲ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಅಣ್ಣಯ್ಯ ಬರೆದಿಟ್ಟಿದ್ದಾರೆ.
ಅಲ್ಲದೇ ದಯವಿಟ್ಟು ಜೀವನದಲ್ಲಿ ನಂಬಿಕೆ ಇಡಬಾರದು, ನನ್ನ ಸಾವಿಗೆ ನಾನೇ ಕಾರಣ. ನನ್ನ ಅಕ್ಕ ಹಾಗೂ ಕುಟುಂಬದವರು ದೇಹವನ್ನು ಮಣ್ಣುಮಾಡಬೇಕೆಂಬುದು ನನ್ನ ಕೊನೆಯ ಆಸೆ ಎಂದು ಬರೆದುಕೊಂಡಿದ್ದಾರೆ.
ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.