ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಪತಿ

ಬೆಂಗಳೂರು, ಜೂ.೨೫- ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ ಪ್ರಿಯಕರನ ಕತ್ತು ಸೀಳಿ ಮೃಗದಂತೆ ವರ್ತಿಸಿದ ಪತಿಯೊಬ್ಬ ರಕ್ತ ಕುಡಿದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ. ಈ ಭೀಕರ ದೃಶ್ಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಕಳೆದ ಜೂನ್ ೧೯ರಂದು ನಡೆದಿರುವ ಈ ಮೃಗೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಕತ್ತು ಕೊಯ್ದು ರಕ್ತ ಕುಡಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೃಶ್ಯವು ಭಯಾನಕವಾಗಿದೆ.
ಚಿಂತಾಮಣಿ ತಾಲೂಕಿನ ಬಟ್ಲಪಲ್ಲಿ ನಿವಾಸಿ ವಿಜಯ್ ತನ್ನ ಪತ್ನಿಯ ಪ್ರಿಯಕರ ಬಾಗೇಪಲ್ಲಿ ತಾಲೂಕಿನ ಮಂಡಂಪಲ್ಲಿಯ ಮಾರೇಶ್ ಎಂಬಾತನ ಕತ್ತು ಸೀಳಿ ರಕ್ತ ಹೀರಿದ್ದಾನೆ.
ಅಸಲಿಗೆ ವಿಜಯ್ ಹಾಗೂ ಮಾರೇಶ್ ಇಬ್ಬರು ಚಿಂತಾಮಣಿ ನಗರದಲ್ಲಿ ವಾಸವಾಗಿದ್ದು, ಇಬ್ಬರೂ ಸಹ ಟಾಟಾ ಏಸ್ ವಾಹನದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು ತನ್ನ ಪತ್ನಿ ಮಾಲಾ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡ ವಿಜಯ್, ಮಾರೇಶ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ಟಾಟಾ ಏಸ್ ಗಾಡಿ ತೆಗೆದುಕೊಂಡು ಬಾ ಬಾಡಿಗೆ ಇದೆ, ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿ ಸಿದ್ದೇಪಲ್ಲಿ ಕ್ರಾಸ್ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ನಡೆಸಿದ್ದಾನೆ.
ವಿಜಯ್ ಚಾಕುವಿನಿಂದ ಮಾರೇಶ್ ಕತ್ತು ಸೀಳಿದ್ದು, ರಕ್ತ ಹೊರಚಿಮ್ಮಿದಾಗ ಅದನ್ನು ಕುಡಿದು ತನ್ನ ಕೋಪ ಪ್ರತಾಪ ತೀರಿಸಿಕೊಂಡಿದ್ದಾನೆ.
ವಿಜಯ್ ಜೊತೆ ಇದ್ದ ಸ್ನೇಹಿತ ಈ ಕತ್ತು ಸೀಳಿ ರಕ್ತ ಕುಡಿಯುವ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
ಘಟನೆ ನಡೆದ ದಿನ ವಿಷಯ ತಿಳಿದ ವಿಜಯ್ ಸಹೋದರ ಹಲ್ಲೆಗೊಳಗಾದ ಮಾರೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ರಾಜಿ ಪಂಚಾಯಿತಿ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರ ಗಮನಕ್ಕೂ ಬಂದಿದ್ದು, ವಿಚಾರಣೆ ನಡೆಸಿದಾಗ ಆರೋಪಿಗಳ ಗುರುತು ಪತ್ತೆಯಾಗಿದೆ. ತದನಂದರ ಮಾರೇಶ್ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ವಿಜಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.