ಪತ್ನಿಯ ಕೊಂದ ಪತಿಗೆ ಜೈಲು ಶಿಕ್ಷೆ

ಕಲಬುರಗಿ,ಏ.17: ಸಾರಾಯಿ ಕುಡಿದದ್ದನ್ನು ಆಕ್ಷೇಪಿಸಿದ ಪತ್ನಿಯ ಕುತ್ತಿಗೆಯನ್ನು ಶೇವಿಂಗ್ ಬ್ಲೇಡ್ ನಿಂದ ಕೊಯ್ದು ಕೊಲೆಗೆ ಕಾರಣನಾದ ಪತಿಗೆ ಇಲ್ಲಿನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಕಲಬುರಗಿ ಎಂಎಸ್‍ಕೆ ಮಿಲ್ ಬಸವನಗರ ನಿವಾಸಿ, ಕೂಲಿ ಕಾರ್ಮಿಕ ಸೈಯದ ಇಬ್ರಾಹಿಂ ಅಲಿಯಾಸ್ ಇಬ್ರಾಹಿಂ ಸೈಯದ್ ಹಬೀಬ್ ( 25) ಶಿಕ್ಷೆಗೊಳಗಾದವ.
2021 ರ ಅಕ್ಟೋಬರ್ 19 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಸೈಯದ ಇಬ್ರಾಹಿಂ ಪತ್ನಿ ನಸೀಮಾ ಬ್ಲೇಡ್‍ನಿಂದ ಆದ ಗಾಯದಿಂದ ಚೇತರಿಸಿಕೊಳ್ಳದೇ,ಆಸ್ಪತ್ರೆಯಲ್ಲಿ ಮೃತಳಾಗಿದ್ದಳು.ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಬಾಡಗಂಡಿ ಅವರು ಕಲಂ 304 ಐಪಿಸಿ 5 ವರ್ಷ ಜೈಲು ಶಿಕ್ಷೆ 20 ಸಾವಿರ ರೂ ದಂಡ,ಕಲಂ 201 ಐಪಿಸಿ ಅಡಿ ಒಂದೂವರೆ ವರ್ಷ ಜೈಲು ಮತ್ತು 5 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಎಸ್.ಆರ್ ನರಸಿಂಹಲು ಸರಕಾರದ ಪರವಾಗಿ ವಾದ ಮಂಡಿಸಿದ್ದರು.