ಪತ್ನಿಯ ಅಣ್ಣನ ಪತ್ನಿ ಕೊಲೆಗೈದ ಯುವಕ ಆತ್ಮಹತ್ಯೆ ಯತ್ನ

ಬೆಂಗಳೂರು,ನ.15-ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಣ್ಣನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮಮೂರ್ತಿ ನಗರದ ಟಿನ್ ಫ್ಯಾಕ್ಟರಿಯ ಬಳಿ ನಡೆದಿದೆ.
ಟಿನ್ ಫ್ಯಾಕ್ಟರಿಯ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಲಾವಣ್ಯ(37) ವಿಜಯ್ ಕುಮಾರ್ ಕೊಲೆ ಮಾಡಿದ್ದಾನೆ.
ಮೃತ ಲಾವಣ್ಯ ಪತಿಯ ತಂಗಿಯನ್ನ ವಿಜಯಕುಮಾರ್ ಮದುವೆಯಾಗಿದ್ದ.ಬಳಿಕ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈ ವಿಚಾರವಾಗಿ ಇಂದು ಆರೋಪಿ ವಿಜಯಕುಮಾರ್ ನನ್ನು ಮಾತುಕತೆಗೆ ಕರೆಯಲಾಗಿತ್ತು. ಈ ವೇಳೆ ಮಾತಿನ ಚಕಮಕಿಯಾಗಿ ಗಲಾಟೆ ನಡೆದಿದೆ.
ಗಲಾಟೆಯ ವೇಳೆ ಸಿಟ್ಟಿಗೆದ್ದ ವಿಜಯಕುಮಾರ್ ಅಲ್ಲೇ ಇದ್ದ ಲಾವಣ್ಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಲಾವಣ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಪಿ ಕೂಡ ಅದೇ ಚಾಕುವಿನಿಂದ ಕುಯ್ದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆರೋಪಿ ವಿಜಯ್ ಕುಮಾರ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.