ಪತ್ನಿಯಿಂದ ಪತಿಗೆ ಅಧಿಕಾರ ಹಸ್ತಾಂತರ


ತಿರುವನಂತಪುರಂ, ಜು. ೨೭- ಕೇರಳದ ಅಲಪ್ಪುಳದ ನಿರ್ಗಮಿತ ಜಿಲ್ಲಾಧಿಕಾರಿ ರೇಣು ರಾಜ್ ಅವರು ತಮ್ಮ ಪತಿಗೆ ಅಧಿಕಾರ ಹಸ್ತಾಂತರಿಸಿದ ಅಪರೂಪದ ಘಟನೆಯೊಂದು ನಡೆದಿದೆ.
ಅಲಪ್ಪುಳದ ನಿರ್ಗಮಿತ ಜಿಲ್ಲಾಧಿಕಾರಿ ರೇಣು ರಾಜ್ ಅವರ ಪತಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ರೇಣು ರಾಜ್ ವೆಂಕಿಟ್ರಾಮನ್ ಅವರನ್ನು ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿ, ಹಸ್ತಲಾಘವ ಮಾಡಿದ ಪ್ರಸಂಗ ಜರುಗಿದೆ.
ಇದನ್ನು ಕಂಡ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಕೂಡಲೇ ವೆಂಕಿಟ್ರಾಮನ್ ಹುದ್ದೆಯನ್ನು ರದ್ದುಗೊಳಿಸುವಂತೆ ಕೋರಿ ಪ್ರತಿಭಟನೆ ನಡೆಸುವುದರೊಂದಿಗೆ ಕಚೇರಿಯ ಹೊರಗೆ ಗೊಂದಲ ಸೃಷ್ಟಿಸಿದರು.
ಅಪಘಾತ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಯುಡಿಎಫ್ ಕಾರ್ಯಕರ್ತರು ಅವರನ್ನು ಇಲ್ಲಿಗೆ ಪೋಸ್ಟ್ ಮಾಡಿರುವುದನ್ನು ವಿರೋಧಿಸಿದರು. ೨೦೧೯ ರಲ್ಲಿ ವೆಂಕಿಟ್ರಾಮನ್ ತಮ್ಮ ಸ್ನೇಹಿತೆ ವಾಫಾ ಫಿರೋಜ್ ಜೊತೆಗೆ ಅತಿವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದಾಗ, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ರಕರ್ತರೊಬ್ಬರು ಮೃತಪಟ್ಟಿದ್ದರು. ೨೦೨೦ ರಿಂದ ಅವರು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ಅವರು ಈಗ ಆಲಪ್ಪುಳಕ್ಕೆ ಹೊಸ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ.