ಪತ್ನಿಗೆ ಬೆದರಿಕೆ ಪತಿ ಸಾವಿಗೆ ಉರುಳು

ಬೆಂಗಳೂರು,ಮೇ೧೬-ಪತ್ನಿಗೆ ವೀಡಿಯೊ ಕಾಲ್ ಮಾಡಿ ಬೆದರಿಸಲು ಹೋದ ಜಿಮ್ ತರಬೇತುದಾರ ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ನಡೆಸಿದೆ. ಮೃತ ವ್ಯಕ್ತಿಯನ್ನು ಬಿಹಾರ ಮೂಲದ ೨೮ ವರ್ಷದ ಅಮೀತ್‌ಕುಮಾರ್ ಎಂದು ಗುರುತಿಸಲಾಗಿದೆ.
ಒಂದು ವರ್ಷದ ಹಿಂದೆ ಅಮೀತ್ ಪ್ರೀತಿಸಿ ವಿವಾಹವಾಗಿದ್ದನು. ಜಿಮ್ ಪಕ್ಕದಲ್ಲೇ ವಾಸವಿದ್ದ ಈತ ಹಾಸನ ಮೂಲದ ಯುವತಿಯನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು.
ವಿವಾಹದ ಬಳಿಕ ಪತ್ನಿ ನರ್ಸಿಂಗ್ ಕೋರ್ಸಿಗೆ ಸೇರ್ಪಡೆಯಾಗಿದ್ದಳು. ಸ್ನೇಹಿತನ ಜತೆ ಹೆಚ್ಚು ಹೊತ್ತು ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದಾಗಿ ಪತ್ನಿ ಗಂಡನಿಂದ ದೂರ ಉಳಿದಿದ್ದಳು.
ಅಮಿತ್ ಮನೆಗೆ ವಾಪಸ್ ಬರುವಂತೆ ಪತ್ನಿಗೆ ದೂರವಾಣಿ ಕರೆ ಮಾಡಿದ್ದಾನೆ. ಇದಾದ ಬಳಿಕ ವೀಡಿಯೊ ಕಾಲ್ ಮಾಡಿ ಮನೆಗೆ ಬಾರದಿದ್ದರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ.
ಕೊರಳಿಗೆ ಹಗ್ಗ ಹಾಕಿಕೊಂಡು ವೀಡಿಯೊ ಕಾಲ್‌ನಲ್ಲಿ ಬೆದರಿಸಿದ್ದಾನೆ. ಈ ಸಂದರ್ಭದಲ್ಲಿ ಕೈಯಲ್ಲಿದ್ದ ಮೊಬೈಲ್ ಜಾರಿ ಬಿದ್ದಿದೆ. ಮೊಬೈಲ್ ಹಿಡಿಯುವ ಭರದಲ್ಲಿ ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.