ಪತ್ನಿಗೆ ಬೆಂಕಿ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪತಿ: ತಾಯಿಯ ಪ್ರಾಣ ಉಳಿಸಿ ಕೊಡಿ ಎಂದು ಗೋಗರೆಯುತ್ತಿರುವ ಬಾಲಕ

ಬೀದರ:ಜೂ.7: ಬಾಲಕನೊಬ್ಬ ತನ್ನ ತಾಯಿಯ ಪ್ರಾಣ ಉಳಿಸಿಕೊಳ್ಳಲು ಪರದಾಟ ಪಟ್ಟಿರುವ ಘಟನೆ ಬಸವೇಶ್ವರ ಆಸ್ಪತ್ರೆಯ ಬಳಿ ನಡೆದಿದೆ. ಸುಟ್ಟ ಗಾಯಗಳಿಂದ ತಾಯಿ ಧನಲಕ್ಷ್ಮೀ ನರಳಾಡುತ್ತಿದ್ದಾರೆ. ಒಂದು ಕಡೆ ಮಕ್ಕಳಿಗಾಗಿ ತನ್ನ ಪ್ರಾಣ ಉಳಿಸಿ ಎಂದು ತಾಯಿ ಮನವಿ ಮಾಡಿಕೊಳ್ಳುತ್ತಿದ್ದಾಳೆ. ಇನ್ನೊಂದು ಕಡೆ ನನ್ನ ತಾಯಿಯ ಚಿಕಿತ್ಸೆಗೆ ಹಣ ನೀಡಿ ಎಂದು ಬಾಲಕ ಮನವಿ ಮಾಡಿಕೊಳ್ಳುತ್ತಿದ್ದಾನೆ.

ಬೀದರ್​ನ ಗುಂಪಾ ನಗರದ ನಿವಾಸಿಯಾದ ಧನಲಕ್ಷ್ಮೀಗೆ 5 ತಿಂಗಳ ಹಿಂದೆ ಬೆಂಕಿ ಹಚ್ಚಿ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾಯಗೊಂಡಿದ್ದ ಧನಲಕ್ಷ್ಮೀ ಬೀದರ್​ನ ಬಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೇಹ ಸುಟ್ಟಿದ್ದರಿಂದ ಮೇ 29ರಂದು ಬಸವೇಶ್ವರ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಆರೋಗ್ಯ ಕರ್ನಾಟಕ ಸ್ಕೀಮ್​ನಲ್ಲಿ ಮಹಿಳೆಗೆ ಆಪರೇಶನ್ ಮಾಡಬೇಕಾಗಿತ್ತು.ಆದರೆ ಮಹಿಳೆಗೆ ರಕ್ತ ಕಡಿಮೆಯಿರುವ ಹಿನ್ನೆಲೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ.
ಸದ್ಯ ಆಸ್ಪತ್ರೆಯಲ್ಲಿ 35 ಸಾವಿರ ಬಿಲ್ ಆಗಿದೆ. ಆಪರೇಷನ್ ಆದರೆ ಮಾತ್ರ ಸ್ಕೀಮ್​ನಲ್ಲಿ ಹಣ ನೀಡೋದಾಗಿ ಆರೋಗ್ಯ ಕರ್ನಾಟಕ ಸಿಬ್ಬಂದಿ ಹೇಳುತ್ತಿದ್ದಾರೆ. ಈ ನಡುವೆ ಆಸ್ಪತ್ರೆಗೆ ಹಣ ಕಟ್ಟಲು ಸಾಧ್ಯವಾಗದೆ ಬಾಲಕ ಪರದಾಡುತ್ತಿದ್ದಾನೆ. ತನ್ನ ತಾಯಿ ಇಲ್ಲದೇ ಹೋದರೆ ನಾನು ನನ್ನ ಎಂಟು ವರ್ಷದ ಸಹೋದರ ಅನಾಥವಾಗುತ್ತೀವಿ. ದಯವಿಟ್ಟು ಸಹಾಯ ಮಾಡಿ ಅಂತ ಬಾಲಕ ಮನವಿ ಮಾಡಿದ್ದಾನೆ.