ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಪತಿ

ಕಲಬುರಗಿ,ಸೆ.14: ಕೌಟುಂಬಿಕ ಕಲಹವೊಂದರಲ್ಲಿ ತನ್ನ ಪತ್ನಿಯ ಮೇಲೆ ಪತಿ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾದ ಘಟನೆ ಚಿತ್ತಾಪುರ ತಾಲ್ಲೂಕಿನ ಅಲ್ಲೂರ್ (ಕೆ) ಗ್ರಾಮದಲ್ಲಿ ವರದಿಯಾಗಿದೆ.
ಮೃತಳನ್ನು ಶ್ರೀಮತಿ ಹಣಮವ್ವ ಗಂಡ ಬಸವರಾಜ್ (35) ಎಂದು ಗುರುತಿಸಲಾಗಿದೆ. ಗುಂಡೇಟಿನಿಂದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಳು ಎನ್ನಲಾಗಿದೆ.
ಪತಿ, ಪತ್ನಿ ಮಧ್ಯೆ ಕಳೆದ ಐದಾರು ವರ್ಷಗಳಿಂದ ಕಲಹ ಉಂಟಾಗಿದ್ದು, ಪತಿಯ ಮನೆಯವರ ಕಿರುಕುಳದಿಂದಾಗಿ ಹಣಮವ್ವಳು ತವರು ಮನೆ ಅಲ್ಲೂರ್(ಕೆ) ಗ್ರಾಮಕ್ಕೆ ಬಂದು ವಾಸವಾಗಿದ್ದಳು. ಪತಿ ಬಸವರಾಜ್ ಆಗಾಗ ಬೀಗರೂರಿಗೆ ಬಂದು ಪತ್ನಿಗೆ ಭೇಟಿ ಮಾಡಿ ಹೋಗುತ್ತಿದ್ದ.
ಗುರುವಾರ ಅಲ್ಲೂರ್(ಕೆ) ಗ್ರಾಮಕ್ಕೆ ಆಗಮಿಸಿದ ಬಸವರಾಜ್ ಪತ್ನಿ ಹಣಮವ್ವಳೊಂದಿಗೆ ಜಗಳಕ್ಕಿಳಿದು ತನ್ನ ಹತ್ತಿರ ಇದ್ದ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‍ಐ ಶ್ರೀಶೈಲ್ ಅಂಬಾಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಗುಂಡೇಟಿನಿಂದ ಮಹಿಳೆಗೆ ಹತ್ಯೆ ಮಾಡಿರುವ ಕೃತ್ಯಕ್ಕೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.