ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಅಯ್ಕೆ

ಕಾರಟಗಿ ನ 0 7: ಸಮೀಪದ ಸಿದ್ದಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆದೆಪ್ಪ ಅಮರಪ್ಪ ಬಸರಿಕಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಆಲಂಭಾಷಾ ಅವರು ತಮ್ಮ ವೈಯಕ್ತಿಕ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಆದೆಪ್ಪ ಅಮರಪ್ಪ ಅವರು ಒಬ್ಬರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಆದೆಪ್ಪ ಅಮರಪ್ಪ ಬಸರೀಕಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪವನಕುಮಾರ ತಿಳಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಆದೆಪ್ಪ ಬಸರೀಕಟ್ಟಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಹಾಲುಮತ ಸಮಾಜದ ಮುಖಂಡರು ಸೇರಿ ಮಾಜಿ ಜಿ.ಪಂ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ ಅವರ ನಿವಾಸಕ್ಕೆ ತೆರಳಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು. ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಆದೆಪ್ಪ ಬಸರೀಕಟ್ಟಿ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಜಿ.ಪಂ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ ಹಾಗೂ ನಿರ್ದೇಶಕರುಗಳಿಗೆ, ಸಮಾಜದ ಮುಖಂಡರು ಮತ್ತು ಗ್ರಾಮದ ಇತರ ಮುಖಂಡರಿಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಹಾಗೂ ಎಲ್ಲಾ ಸಂಘದ ನಿರ್ದೇಶಕರುಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ ಸಂಘದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತಹ ಕೆಲಸ ಮಾಡುವುದಾಗಿ ಅವರು ತಿಳಿಸಿದರು.