ಪತಿ ಜೊತೆ ಬಾಡಿಗೆ ಮನೆಯಲ್ಲಿ ನೆಲೆಸಲಿರುವ ಮಾಜಿ ರಾಜಕುಮಾರಿ!

ನ್ಯೂಯಾರ್ಕ್, ನ.೧೫- ಪ್ರಿಯಕರನನ್ನು ವರಿಸುವ ಮೂಲಕ ಜಪಾನ್ ರಾಜಕುಮಾರಿಯ ಪಟ್ಟಕ್ಕೆ ತಿಲಾಂಜಲಿ ನೀಡಿ ವಿಶ್ವದ ಗಮನ ಸೆಳೆದಿದ್ದ ಮಾಕೋ ಇದೀಗ ತನ್ನ ಪತಿ ಕೇಯ್ ಕೊಮುರೊ ಜೊತೆ ಇಂದು ಮುಂಜಾನೆ ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ. ನಿನ್ನೆ ಬೆಳಗ್ಗೆ ಟೋಕಿಯೋ ವಿಮಾನ ನಿಲ್ದಾಣದಿಂದ ದಂಪತಿ ಹೊರಟಿದ್ದರು.
ಕಾಲೇಜು ದಿನದಿಂದ ಕೇಯ್ ಜೊತೆ ಪ್ರೀತಿಯಲ್ಲಿದ್ದ ಮಾಕೋ ಕಳೆದ ತಿಂಗಳಷ್ಟೇ ವಿವಾಹ ಬಂಧನಕ್ಕೆ ಒಳಪಟ್ಟಿದ್ದರು. ಜಪಾನ್ ಕಾನೂನಿನ ಪ್ರಕಾರ ರಾಜಕುಟುಂಬದ ಮಹಿಳೆಯೊಬ್ಬಳು ಸಾಮಾನ್ಯ ವ್ಯಕ್ತಿಗಳನ್ನು ವರಿಸಿದರೆ, ರಾಜಗದ್ದುಗೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ನಂತರದ ದಿನಗಳಲ್ಲಿ ಯಾವುದೇ ರಾಜಮಯಾರ್ದೆ ಅಥವಾ ಸೌಲಭ್ಯಗಳಿಲ್ಲದೆ ಅವರು ಬದುಕಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಸಾಮಾನ್ಯ ಕುಟುಂಬದ ಪ್ರಿಯಕರನಿಗೋಸ್ಕರ ಮಾಕೋ ರಾಜಗದ್ದುಗೆಯನ್ನು ಬಿಟ್ಟು ವಿಶ್ವದ ಗಮನ ಸೆಳೆದಿದ್ದರು. ಇನ್ನು ಕೊಮುರೋ ನ್ಯೂಯಾರ್ಕ್‌ನ ಕಾನೂನು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ದಂಪತಿ ನ್ಯೂಯಾರ್ಕ್‌ನಲ್ಲೇ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ರೂಮ್‌ನಲ್ಲಿ ವಾಸಮಾಡಲಿದ್ದಾರೆ. ಏರ್‌ಪೋರ್ಟ್‌ಗೆ ಆಗಮಿಸುವ ವೇಳೆ ಇಬ್ಬರಿಗೂ ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿ ಹಾಗೂ ಏರ್‌ಪೋರ್ಟ್ ಪೊಲೀಸರು ಸುತ್ತುವರಿದು ಭದ್ರತೆ ನೀಡಿದ್ದರು. ಇನ್ನು ಕಳೆದ ತಿಂಗಳು ನಡೆದ ನ್ಯೂಯಾರ್ಕ್‌ನ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಕೊಮುರೊ ಅನುತ್ತೀರ್ಣರಾಗಿದ್ದು, ದಂಪತಿಗೆ ದೊಡ್ಡ ಹಿನ್ನಡೆ ತಂದಿತ್ತು. ಇದರ ಹೊರತಾಗಿಯೂ ಸದ್ಯ ದಂಪತಿ ನ್ಯೂಯಾರ್ಕ್‌ಗೆ ಬಂದು ನೆಲೆಸಲು ನಿರ್ಧರಿಸಿದ್ದಾರೆ.