ಪತಿ ಕಿರುಕುಳ: 12 ಕಿ.ಮೀ. ನಡೆದು ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ 8 ತಿಂಗಳ ಗರ್ಭಿಣಿ

ಕಲಬುರಗಿ:ಮೇ.30:ಪತಿಯ ಕಿರುಕುಳ ತಾಳಲಾರದೇ 8 ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು 12 ಕಿ.ಮೀ. ನಡೆದುಕೊಂಡು ಪೋಲಿಸ್ ಠಾಣೆಗೆ ಬಂದಿರುವ ಘಟನೆ ಜಿಲ್ಲೆಯ ಕಮಲಾಪುರದಲ್ಲಿ ವರದಿಯಾಗಿದೆ.
ಕಮಲಾಪುರ ತಾಲ್ಲೂಕಿನ ಬಂಡನಕೇರಾ ತಾಂಡಾದ ನಿವಾಸಿ ಚೀನಾಬಾಯಿ ಎಂಬ ಮಹಿಳೆಯೇ ತನ್ನ ಪತಿಯ ಹಿಂಸೆ ತಾಳಲಾರದೇ ಸುಮಾರು 12 ಕಿ.ಮೀ. ಕಾಲ್ನಗಿಯಲ್ಲಿಯೇ ಪೋಲಿಸ್ ಠಾಣೆಗೆ ಬಂದಿದ್ದಾಳೆ. ಆಕೆಯ ಪತಿ ಸುನೀಲ್ ಹಾಗೂ ಆತನ ಸಹೋದರ ಗೋರಖನಾಥ್ ಅವರಿಬ್ಬರೂ ಸೇರಿ ತನಗೆ ತವರು ಮನೆಯಿಂದ ಎರಡು ಲಕ್ಷ ರೂ.ಗಳನ್ನು ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಸುನೀಲ್ ಹಾಗೂ ಚೀನಾಬಾಯಿ ದಂಪತಿಗೆ ಮದುವೆಯಾಗಿ ಎರಡು ವರ್ಷಗಳು ಕಳೆದಿವೆ. ಈ ಮುಂಚೆ ಇಬ್ಬರು ಪತ್ನಿಯರು ಆತನಿಗೆ ಬಿಟ್ಟು ಹೋಗಿದ್ದು, ಮೂರನೇ ಮದುವೆಯನ್ನು ಚೀನಾಬಾಯಿಯೊಂದಿಗೆ ಮಾಡಿಕೊಂಡಿದ್ದಾನೆ. ನಿತ್ಯ ಕುಡಿದು ಬಂದು ನನ್ನ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದಾನೆ. ಆತನ ಸಹೋದರ ಪ್ರಚೋಚನೆ ನೀಡುತ್ತಿದ್ದಾನೆ ಎಂದು ನೊಂದ ಮಹಿಳೆಯು ದೂರಿದ್ದಾಳೆ.
ಈ ಮುಂಚೆ ಪುತ್ರಿಯ ಪತಿಗೆ ಒಂದು ಲಕ್ಷ ರೂ.ಗಳನ್ನು ನೀಡಿದ್ದೇವೆ. ಈಗ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದಾನೆ ಎಂದು ನೊಂದ ಮಹಿಳೆಯ ತಾಯಿ ಆರೋಪಿಸಿದ್ದಾಳೆ. ಕಮಲಾಪುರ ಠಾಣೆಯ ಪೋಲಿಸರ ಸಲಹೆಯಂತೆ ಇದೀಗ ನಗರದ ಮಹಿಳಾ ಪೋಲಿಸ್ ಠಾಣೆಗೆ ಬಂದು ದೂರು ನೀಡಿದ್ದಾಗಿ ಮಹಿಳೆ ಚೀನಾಬಾಯಿ ತಿಳಿಸಿದ್ದಾಳೆ.