ಪತಿಯನ್ನು ಕೊಂದ ಪತ್ನಿ,ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಕಲಬುರಗಿ, ಜ 18: ಪತಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ವ್ಯಕ್ತಿಯ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಇಲ್ಲಿನ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಒಟ್ಟು 15 ಸಾವಿರ ರೂ ದಂಡ ವಿಧಿಸಿದೆ.
ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ಠಾಣೆ ವ್ಯಾಪ್ತಿಯ ಗೊಬ್ಬುರ (ಬಿ) ತಾಂಡಾದ ನಿವಾಸಿಗಳಾದ ಗೇಮು ವಿಠಲ ಪವಾರ ಮತ್ತು ಕವಿತಾ ಈಶ್ವರ್ ಚವ್ಹಾಣ ಶಿಕ್ಷೆಗೊಳಗಾದವರು.
್ಲ 2020 ರ ಆಗಸ್ಟ್ 1 ರಂದು ಹೊಲದಲ್ಲಿ ಈಶ್ವರ್ ಚವ್ಹಾಣನು ತನ್ನ ಪತ್ನಿ ಕವಿತಾ ಮತ್ತು ಆಕೆಯ ಪ್ರಿಯಕರ ಗೇಮು ವಿಠಲ ಪವಾರ ಅನೈತಿಕ ಚಟುವಟಿಕೆಯಲ್ಲಿದ್ದನ್ನು ಕಂಡು ರೋಸಿಹೋಗಿ ಕೈಗಳಿಂದ ಹೊಡೆದಿದ್ದನು.ಆಗ ಆತನ ಪತ್ನಿ ಮತ್ತು ಪ್ರಿಯಕರ ಸೇರಿ ಈಶ್ವರನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಕ್ರಿಮಿನಾಶಕ ಕುಡಿಸಿದ ಪರಿಣಾಮ ಈಶ್ವರ್ ಮೃತಪಟ್ಟಿದ್ದನು. ಅಫಜಲಪುರ ಸಿಪಿಐ ಮಹಾದೇವ ಪಂಚಮುಖಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3 ನೇ ಅಪರ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡವಿಧಿಸಿದ್ದಾರೆ.
ದಂಡದ ಹಣದಲ್ಲಿ 10 ಸಾವಿರ ರೂಗಳನ್ನು ಮೃತನ ಅಪ್ರಾಪ್ತ ಮಕ್ಕಳಿಗೆ ನೀಡುವಂತೆ ಆದೇಶಿಸಿದ್ದಾರೆ.ಸರಕಾರದ ಪರವಾಗಿ 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.