ಪಡ್ಡು ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು:
ಅಕ್ಕಿ- ಮೂರು ಲೋಟ ಉದ್ದಿನ ಬೇಳೆ- ಅರ್ಧ ಲೋಟ
ಅವಲಕ್ಕಿ- ಕಾಲು ಲೋಟ ಮೆಂತ್ಯೆ- ಮುಕ್ಕಾಲು ಚಮಚ
ಈರುಳ್ಳಿ- ಎರಡು ಕರಿಬೇವು- ಅರ್ಧ ಕಟ್ಟು
ಹಸಿ ಶುಂಠಿ- ಒಂದು ಇಂಚು ಕಾಯಿ ತುಂಡುಗಳು- ಒಂದು ಕಪ್
ಹಸಿಮೆಣಸಿನಕಾಯಿ(ಬೇಕಿದ್ದಲ್ಲಿ) ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಅಕ್ಕಿ, ಉದ್ದಿನ ಬೇಳೆ, ಅವಲಕ್ಕಿ ಮತ್ತು ಮೆಂತ್ಯೆ ಕಾಳುಗಳನ್ನು ಚೆನ್ನಾಗಿ ತೊಳೆದು ಐದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಗ್ರೈಂಡರ್/ಮಿಕ್ಸರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದವಿರಲಿ. ಕೊನೆಯಲ್ಲಿ ಉಪ್ಪು ಹಾಕಿ. (ಬೇಸಿಗೆಯಲ್ಲಿ ಮರುದಿನ ಬೆಳಿಗ್ಗೆ ಉಪ್ಪು ಹಾಕಿದರೆ ಸಾಕು). ಮರುದಿನ ಬೆಳಿಗ್ಗೆ, ಈರುಳ್ಳಿ, ಕರಿಬೇವು, ಹಸಿಶುಂಠಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. (ಬೇಕೆಂದಲ್ಲಿ ಹಸಿಮೆಣಸಿನ ಕಾಯನ್ನೂ ಸಹ). ತೆಂಗಿನ ಕಾಯಿಯನ್ನು ತುರಿಯದೆ, ಚಾಕುವಿನಿಂದ ಸಣ್ಣ ಸಣ್ಣ ಪೀಸ್ ಗಳನ್ನಾಗಿ ಮಾಡಿಕೊಳ್ಳಿ. ಈಗ ಈ ಎಲ್ಲಾ ಪದಾರ್ಥಗಳನ್ನೂ ರುಬ್ಬಿದ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಸ್ಟವ್ ಮೇಲೆ ಪಡ್ಡುವಿನ ಕಾವಲಿಯನ್ನಿಡಿ. ಅದು ಕಾದಾಗ ಒಂದೆರಡು ಹನಿ ಎಣ್ಣೆ ಬಿಟ್ಟು ಪ್ರತಿಯೊಂದಕ್ಕೂ ಹಿಟ್ಟನ್ನು ಹಾಕಿ ಮುಚ್ಚಿಡಿ. ಉರಿ ಮಧ್ಯಮವಿರಲಿ . ಒಂದೆರಡು ನಿಮಿಷದ ನಂತರ ಪ್ರತಿಯೊಂದಕ್ಕೂ ಹನಿ ಎಣ್ಣೆ ಬಿಟ್ಟು ತಿರುಗಿಸಿ ಹಾಕಿ ಮುಚ್ಚಳ ಮುಚ್ಚಿಡಿ. ಈಗ ಉರಿ ಸಣ್ಣ ಇರಲಿ. ಮತ್ತೊಂದೆರಡು ನಿಮಿಷಕ್ಕೆ ಈಚೆ ತೆಗೆಯಿರಿ. ರುಚಿರುಚಿಯಾದ ಪಡ್ಡು ತಿನ್ನಲು ಸಿದ್ಧ. ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ತಿನ್ನಲು ಕೊಡಿ.