ಪಡಿತರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ: ಶಾಸಕ ಯು.ಟಿ.ಖಾದರ್ ಆರೋಪ

ಬಂಟ್ವಾಳ, ಮೇ ೨೧- ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ಕೊಡದ ರಾಜ್ಯ ಸರಕಾರವು ಇರುವ ಪಡಿತರ ಚೀಟಿಗಳನ್ನೇ ರದ್ದು ಮಾಡುತ್ತಿದೆ. ಹೀಗಾಗಿ ಪಡಿತರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.
ಅವರು ತುಂಬೆಯಲ್ಲಿ ಪತ್ರಕರ್ತರ ಜತೆ ಮಾತನಾಡಿ, ಹಿಂದೆ ನಾವು ಮಾಡಿದ ವ್ಯವಸ್ಥೆಯನ್ನು ಮುಂದುವರಿಸುವ ಆಸಕ್ತಿ ಪ್ರಸ್ತುತ ಸರಕಾರಕ್ಕೆ ಇಲ್ಲವಾಗಿದೆ. ಸರಕಾರಕ್ಕೆ ರೇಶನ್ ಕಾರ್ಡ್ ಕಟ್ ಮಾಡುವ ಆಸಕ್ತಿ ಕಾರ್ಡ್ ವಿತರಣೆಗೆ ಇಲ್ಲವಾಗಿದೆ. ಬಡ ಜನತೆ ರಿಕ್ಷಾ, ಬೈಕ್ ಖರೀದಿಸಿದರೆ, ಮಹಿಳೆಯರು ಮನೆ ಕಟ್ಟಲು ಸಾಲ ಪಡೆದರೆ ಅವರಿಗೆ ಪಡಿತರ ನೀಡುವುದನ್ನೇ ತಡೆಯಲಾಗಿದೆ.
ಈ ಎರಡು ತಿಂಗಳಲ್ಲಿ ಎಪಿಎಲ್-ಬಿಪಿಎಲ್ ಎಂದು ನೋಡದೆ ಯಾರು ನ್ಯಾಯ ಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾನೋ ಅವರಿಗೆ ಅಕ್ಕಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ತಮ್ಮಲ್ಲಿ ಕಷ್ಟ ಇದ್ದಾಗ ಮಾತ್ರ ಜನರು ನ್ಯಾಯಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾರೆ ಎಂಬ ಸತ್ಯವನ್ನು ಸರಕಾರ ಅರಿಯಬೇಕಿದೆ.
ರಾಜ್ಯ ಸರಕಾರವು ಕೋವಿಡ್ ಸಂದರ್ಭ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಕರಾವಳಿಯ ಆಧಾರ ಸ್ತಂಭ ಮೀನುಗಾರರನ್ನು ಕಡೆಗಣಿಸಿರುವುದು ಖಂಡಿನೀಯವಾಗಿದ್ದು, ಮೀನುಗಾರರಿಗೂ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ. ಕಳೆದ ಡಿಸೆಂಬರ್‌ನಿಂದ ಮೀನುಗಾರರಿಗೆ ಸರಕಾರ ಸಬ್ಸಿಡಿಯ ಡಿಸೇಲನ್ನು ಕೂಡ ನೀಡಿಲ್ಲ.
ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರ ವೇತನ ಬಾರದೇ ಇದ್ದು, ಇದನ್ನು ಸರಕಾರದ ಗಮನಕ್ಕೆ ತರಲಾಗಿದೆ. ಜತೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುರುವ ಇ-ಸರ್ವೇಯ ಜವಾಬ್ದಾರಿಯನ್ನು ಮುಂದಕ್ಕೆ ಹಾಕಲು ಆಗ್ರಹಿಸಲಾಗಿದೆ ಎಂದರು.
ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಕ್ಷೇತ್ರದ ಎಲ್ಲಾ ಕಡೆ ಟಾಸ್ಕ್ಪೋರ್ಸ್ ಸಭೆ ನಡೆಸಲಾಗಿದ್ದು, ಕ್ಷೇತ್ರಕ್ಕೆ ಸಂಬಂಽಸಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯಲ್ಲಿ ೫೦ ಬೆಡ್, ಯೆನಪೋಯ ಸಂಸ್ಥೆಯ ಅಪಾರ್ಟ್ಮೆಂಟ್‌ನಲ್ಲಿ ೭೦ ಬೆಡ್ ಹಾಗೂ ಯುನಿವರ್ಸಿಟಿಯ ಹಾಸ್ಟೆಲ್‌ನಲ್ಲಿ ೧೦೦ ಬೆಡ್‌ಗಳ ವಿಶ್ರಾಂತಿ ಕೇಂದ್ರಗಳನ್ನು ಮಾಡಲಾಗಿದೆ ಎಂದರು.
ಈ ವೇಳೆ ಬಂಟ್ವಾಳ ತಾ.ಪಂ.ನಿಟಕಪೂರ್ವ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಮಜೀದ್ ಪೇರಿಮಾರ್, ಇಮ್ತಿಯಾಜ್ ತುಂಬೆ, ಇಕ್ಬಾಲ್ ಸುಜೀರ್, ಕೃಷ್ಣ ಗಟ್ಟಿ, ಸಲಾಂ, ಮಜೀದ್, ರಶೀದ್, ಇಶಾಮ್ ಮೊದಲಾದವರು ಉಪಸ್ಥಿತರಿದ್ದರು.