ಪಡಿತರ ವಿತಣೆಯಲ್ಲಿ ಅಕ್ರಮ: ಜಿಲ್ಲಾಡಳಿತಕ್ಕೆ ಮನವಿ

ದಾವಣಗೆರೆ,ನ.17: ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ವೀರಾಚಾರಿ, ಮಿಟ್ಲಕಟ್ಟೆ ಗ್ರಾಮದಲ್ಲಿ ಪಡಿತರ ವಿತರಣೆಯ ಪರವಾನಿಗೆ ಪಡೆದಿರುವ ಸಿದ್ದರಾಮಪ್ಪ ಎಂಬುವರು ಕಳೆದ 20 ತಿಂಗಳಿನಿಂದ ಸರಿಯಾಗಿ ಪಡಿತರ ವಿತರಿಸದೆ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.ಸರ್ಕಾರ ಯಾರೂ ಸಹ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಬಡ ಜನರಿಗೆ ಪಡಿತರ ವ್ಯವಸ್ಥೆಯ ಮೂಲಕ ಉಚಿತ ಅಕ್ಕಿ ವಿತರಿಸುತ್ತಿದೆ. ಆದರೆ, ಇದರ ವಿತರಣೆ ಜವಾಬ್ದಾರಿ ಹೊಂದಿರುವ ಸಿದ್ದರಾಮಪ್ಪ ಎಂಬುವರು ಪಡಿತರ ಫಲಾನುಭವಿಗಳಿಗೆ ವಿತರಿಸುವ ಅಕ್ಕಿಯ ತೂಕದಲ್ಲಿ ಕಡಿಮೆ ಕೊಡುವ ಮೂಲಕ ಪ್ರತಿ ತಿಂಗಳು ಬಡವರಿಗೆ ಸೇರಬೇಕಾಗಿರುವ 15 ಕ್ವಿಂಟಲ್ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಬಡವರಿಗೆ ಅನ್ಯಾಯವೆಸಗಿದ್ದಾರೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮರ್ಪಕ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಾಗೇಂದ್ರಪ್ಪ, ಮನೋಜ್, ಸಿ.ನಿಂಗಪ್ಪ, ಮಲ್ಲೇಶ್.ಎಚ್, ಮಂಜಪ್ಪ, ರಾಜಪ್ಪ, ಶಶಿಧರ, ಅಂಜಿನಪ್ಪ, ಮಂಜಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.