ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರಿಗೆ ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆ: ಡಿ.ಬಿ.ಟಿ. ವಂಚಿತ ಫಲಾನುಭವಿಗಳು ಜು. 15 ರೊಳಗಾಗಿ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಳ್ಳಲು ಸೂಚನೆ


ಕಲಬುರಗಿ,ಜು.11:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಅನ್ನ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದ್ಯಸರಿಗೆ 5 ಕೆ.ಜಿ. ಯಂತೆ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದ್ದು, ಆದರೆ ಮುಂದುವರೆದು ಇನ್ನೂ 5 ಕೆ.ಜಿ. ಹೆಚ್ಚುವರಿಯಾಗಿ ಆಹಾರಧಾನ್ಯಗಳನ್ನು ವಿತರಿಸುವ ಬದಲಾಗಿ ಕಲಬುರಗಿ ತಾಲೂಕಿನ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ. ಗೆ ರೂ. 34X5 = 170 ರೂ. ಗಳನ್ನು ಪಡಿತರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಮೂಲಕ ವರ್ಗಾಯಿಸುವ ಪ್ರಕ್ರಿಯೆ ಚಾಲನೆಗೊಂಡಿರುತ್ತದೆ ಎಂದು ಕಲಬುರಗಿ ತಹಶೀಲ್ದಾರರಾದ ಮಧುರಾಜ್ ಅವರು ತಿಳಿಸಿದ್ದಾರೆ.
ಅದರಂತೆ ಕಲಬುರಗಿ ತಾಲೂಕಿನಲ್ಲಿ ಒಟ್ಟು 3,778 ಡಿಬಿಟಿ (DBT) ವಂಚಿತ ಕಾರ್ಡುದಾರರು ಬ್ಯಾಂಕ್ ಖಾತೆಗಳನ್ನು ಸರಿಪಡಿಸುವ ಪ್ರಕ್ರಿಯೆ ನಡೆದಿದ್ದು, ಡಿಬಿಟಿ (DBT) ವಂಚಿತ ಪಡಿತರ ಚೀಟಿದಾರರು ಈ ಕೆಳಗಿನಂತೆ ಕ್ರಮವಹಿಸಬೇಕು.
In Active case (ಇನ್ ಆಕ್ಟಿವ್ ಕೇಸ್) : ಫಲಾನುಭವಿಗಳು ಕಡ್ಡಾಯವಾಗಿ ಆಧಾರ ಕಾರ್ಡ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಗೆ (ಇ-ಕೆವೈಸಿ) (EKYC) ಮಾಡಿಸಬೇಕಾಗಿರುತ್ತದೆ
Not available in DB (ನಾಟ್ ಅವೈಲೇಬಲ್ ಇನ್ ಡಿ.ಬಿ.) : ಫಲಾನುಭವಿಗಳು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಫಲಾನುಭವಿಗಳು ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು ತಿಳಿಲಾಗಿದೆ.
Not valid Aadhar No (ನಾಟ್ ವ್ಯಾಲಿಡ್ ಆಧಾರ್ ನಂಬರ್) : ಫಲಾನುಭವಿಗಳು ಕಡ್ಡಾಯವಾಗಿ ಅವರ ನಿಖರವಾದ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು.
ಈ ಡಿಬಿಟಿ (DBT) ವಂಚಿತ ಫಲಾನುಭವಿಗಳ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿವಾರು ಈಗಾಗಲೇ ನೀಡಲಾಗಿದ್ದು, ಪಡಿತರ ಚೀಟಿದಾರರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ಮೇಲ್ಕಂಡಂತೆ ಪ್ರಕರಣಗಳು ಕಂಡುಬಂದಲ್ಲಿ ದಿನಾಂಕ:15-07-2023 ರೊಳಗಾಗಿ ಬ್ಯಾಂಕ್ ಖಾತೆಯನ್ನು ಸರಿಪಡಿಕೊಳ್ಳಬೇಕು. ಒಂದು ವೇಳೆ ನಿಗದಿತ ಸಮಯದೊಳಗಾಗಿ ತಮ್ಮ ಬ್ಯಾಂಕ ಖಾತೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಈ ಯೋಜನೆಯಿಂದ ವಂಚಿತಗೊಳ್ಳುವ ಸಂಭವವಿರುತ್ತದೆ.
ಆದ್ದರಿಂದ ಕಲಬುರಗಿ ತಾಲೂಕಿನ ಫಲಾನುಭವಿಗಳು ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ತಮ್ಮ ಪಡಿತರ ಚೀಟಿಗಳನ್ನು ಪರಿಶೀಲಿಸಿಕೊಂಡು ಬ್ಯಾಂಕ್ ಖಾತೆಯನ್ನು ಮೇಲಿನಂತೆ ಸರಿಪಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.