ಪಡಿತರ ಚೀಟಿಗಳ ಫಲಾನುಭವಿಗಳ ಖಾತೆಗೆ 16,32,58,310 ರೂ.ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ :ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ, ಜು.16: ಬೀದರ ಜಿಲ್ಲೆಯ ಒಟ್ಟು 348979 ಪಡಿತರ ಚೀಟಿಗಳ ಪೈಕಿ 2,66,720 ಪಡಿತರ ಚೀಟಿಗಳ ಒಟ್ಟು 1002035 ಫಲಾನುಭವಿಗಳ ಖಾತೆಗೆ ಒಟ್ಟು 16,32,58,310 ರೂ. ಗಳನ್ನು ಡಿ.ಬಿ.ಟಿ ಮೂಲಕ ಹಣ ವರ್ಗಾಯಿಸಲಾಗಿದೆ ಮತ್ತು ಈಗಾಗಲೇ ಪಡಿತರ ಚೀಟಿ ಮುಖ್ಯಸ್ಥರ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮೆಯಾಗಿವೆ.

ಅನ್ನಭಾಗ್ಯ ಯೋಜನೆಯಡಿ ಬೀದರ ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಯ ಫಲಾನುಭವಿಗಳಿಗೆ ನೀಡಲಾಗುತ್ತಿರುವ 10 ಕೆ.ಜಿ. ಅಕ್ಕಿಯಲ್ಲಿ 5 ಕೆ.ಜಿ. ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಾಗಿ ನೇರ ನಗದು ವರ್ಗಾವಣೆ ಮಾಡಲಾಗಿದೆ.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಒಟ್ಟು 10 ಕೆ.ಜಿ. ಅಕ್ಕಿ ಆಹಾರಧಾನ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸಲಾಗುವ 05 ಕೆ.ಜಿ. ಅಕ್ಕಿ ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 05 ಕೆ.ಜಿ. ಅಕ್ಕಿ ಆಹಾರಧಾನ್ಯ ವಿತರಿಸಲು ಉದ್ದೇಶಿಸಿದ್ದು, ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಾಗಿ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಬೀದರ ಜಿಲ್ಲೆಗೆ ಸರ್ಕಾರದಿಂದ ನೇರ ನಗದು ವರ್ಗಾವಣೆ ಸಂಬಂಧ ಒಟ್ಟು 19.41 ರೂ. ಕೋಟಿ ಅನುದಾನ ಸ್ವೀಕೃತವಾಗಿರುತ್ತದೆ.

ಬೀದರ ಜಿಲ್ಲೆಗೆ ಇನ್ನು 34054 ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ ಕುಟುಂಬದ ಮುಖ್ಯಸ್ಥರ ನಿಷ್ಕ್ರೀಯವಾಗಿರುವ ಬ್ಯಾಂಕ್ ಖಾತೆಗಳು, ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಮಾಡದೇ ಇರುವುವು, ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳು ಇಲ್ಲದೇ ಇರುವವರು ಅಂತಹ ಪಡಿತರ ಚೀಟಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿರುವುದಿಲ್ಲ.

ಈ ಮೇಲಿನ 34054 ಪಡಿತರ ಚೀಟಿ ಫಲಾನುಭವಿಗಳಿಗೆ ಇದೇ ತಿಂಗಳ ಜುಲೈ 20ನೇ ತಾರೀಖಿನೊಳಗಾಗಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳು ನಿಷ್ಕ್ರೀಯವಾಗಿದ್ದನ್ನು ಚಾಲ್ತಿ/ಸಕ್ರಿಯ ಮಾಡಿಸಿಕೊಳ್ಳಲು, ಆಧಾರ್ ಜೋಡಣೆ ಮಾಡದೇ ಇದ್ದವರು ತಮ್ಮ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಲು, ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆ ಇಲ್ಲದವರು ಸಮೀಪದ ಅಂಚೆ ಕಛೇರಿಗೆ ಭೇಟಿ ನೀಡಿ (ಐಪಿಪಿಬಿ) ಅಡಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಈ ತಿಂಗಳ 20ನೇ ತಾರೀಖಿನೊಳಗಾಗಿ ಖಾತೆಗಳನ್ನು ಸರಿಪಡಿಸಿಕೊಂಡಿದ್ದಲ್ಲಿ ಮತ್ತು ಹೊಸ ಖಾತೆಗಳನ್ನು ಪಡೆದಿದ್ದಲ್ಲಿ ಅಂತಹ ಪಡಿತರ ಚೀಟಿ ಫಲಾನುಭವಿಗಳಿಗೆ ಮುಂದಿನ ಅಂದರೆ ಆಗಸ್ಟ್-2023ರ ಮಾಹೆಗೆ ನಗದು ವರ್ಗಾವಣೆ ಪಡೆಯುವರು.

ಈ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಸೀಲ್ದಾರರ ಕಛೇರಿ (ಆಹಾರ ಶಾಖೆ)ಗಳಲ್ಲಿ, ನ್ಯಾಯಬೆಲೆ ಅಂಗಡಿಗಳ ಮುಂದೆ 34054 ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯನ್ನು ಪ್ರದರ್ಶಿಸಲಾಗಿದೆ. ಅಂತಹ ಪಡಿತರ ಚೀಟಿ ಫಲಾನುಭವಿಗಳು ಕೂಡಲೇ ತಮ್ಮ ಬ್ಯಾಂಕ್ ಖಾತೆಗಳನ್ನು ಸಕ್ರೀಯಗೊಳಿಸುವುದು, ಆಧಾರ್ ಜೋಡಣೆ ಮಾಡುವುದು, ಕಾರ್ಡುಗಳ ಇ-ಕೆವೈಸಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ ಹಾಗೂ ಹೊಸ ಖಾತೆಗಳನ್ನು ತೆರೆಯುವವರು ಅಂಚೆ ಕಛೇರಿಯ ಬ್ಯಾಂಕ್ ಸಿಬ್ಬಂದಿಗಳ ಸಹಕಾರದೊಂದಿಗೆ ಎಲ್ಲಾ ತಾಲ್ಲೂಕು ವ್ಯಾಪ್ತಿಗಳಲ್ಲಿ ಕ್ಯಾಂಪ್‍ಗಳನ್ನು ನಡೆಸಲಾಗುತ್ತಿದ್ದು, ಪಡಿತರ ಚೀಟಿ ಫಲಾನುಭವಿಗಳಿಗೆ ಅಂಚೆ ಕಛೇರಿಯ (ಐಪಿಪಿಬಿ) ಅಡಿ ಹೊಸ ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ತೆಗೆಯಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಬೀದರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.