ಪಡಿತರ ಗ್ರಾಹಕರಿಗೆ ಕಳಪೆ ಗುಣಮಟ್ಟದ ಧಾನ್ಯಗಳ ಪೂರೈಕೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.31: ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಗ್ರಾಹಕರಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಲಾಗುತ್ತಿದ್ದು ಕಳಪೆ ಆಹಾರ ದಾನ್ಯಗಳನ್ನು ವಿತರಿಸುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ತಾಲೂಕಿನ ಶೀಳನೆರೆ ಹೋಬಳಿ ಬ್ಯಾಲದಕೆರೆ ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸಲಾಗುತ್ತಿದೆ ಎನ್ನುವ ದೂಳು ಮತ್ತು ಕಲ್ಲು ಮಿಶ್ರಿತ ರಾಗಿಯ ಸಮೇತ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿರುವ ಆಹಾರ ಇಲಾಖೆಯ ಕಛೇರಿಗೆ ಆಗಮಿಸಿದ ರೈತ ಸಂಘದ ಕಾರ್ಯಕರ್ತರು ಪಡಿತರ ಗ್ರಾಹಕರಿಗೆ ತಿನ್ನಲು ಯೋಗ್ಯವಲ್ಲದ ರಾಗಿ ವಿತರಿಸುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ರಾಜ್ಯ ಸರ್ಕಾರ ಅನ್ನಭಾಗ್ಯದ ಜೊತೆಗೆ ಜನರಿಗೆ ಕಲ್ಲು ಮಣ್ಣು ತಿನ್ನುವ ಭಾಗ್ಯವನ್ನು ಕರುಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಉತ್ಪಾಧಿಸುವ ರಾಗಿ, ಭತ್ತ ಮುಂತಾದ ಆಹಾರ ಧಾನ್ಯಗಳನ್ನು ಬೆಂಬಲ ಬೆಲೆ ಅಡಿ ಖರೀದಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ನಿರಂತರವಾಗಿ ಆರಂಭಿಸಿದರೆ ರೈತರು ಗುಣಮಟ್ಟದ ಆಹಾರ ಧಾನ್ಯಗಳನ್ನು ಸರ್ಕಾರಕ್ಕೆ ಪೂರೈಕೆ ಮಾಡುತ್ತಾರೆ.
ಆದರೆ ರಾಜ್ಯ ಸರ್ಕಾರ ಸುಗ್ಗಿ ಕಾಲದ ಮುಗಿದ ಅನಂತರ ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದೆ.
ಇದರಿಂದಾಗಿ ಸುಗ್ಗಿಯ ಕಾಲದಲ್ಲಿ ರೈತರಿಂದ ಕಡಿಮೆ ಬೆಲೆ ಆಹಾರ ಉತ್ಪನ್ನಗಳನ್ನು ಖರೀದಿಸಿದ ದಳ್ಳಾಳಿಗಳು ಖರೀದಿ ಕೇಂದ್ರಗಳ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಲ್ಲು ಮಣ್ಣು ತುಂಬಿ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಾರೆ.
ರಾಜ್ಯ ಸರ್ಕಾರ ಖರೀದಿ ಕೇಂದ್ರದಲ್ಲಿರುವ ತನ್ನ ಇಲಾಖೆಯ ನೌಕರರು ಖರೀದಿಸಿದ ಕಳಪೆ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಗ್ರಾಹಕರಿಗೆ ವಿತರಿಸಿ ಜನರಿಗೆ ಕಲ್ಲು ಮಣ್ಣು ತಿನ್ನುವ ಭಾಗ್ಯವನ್ನು ಕರುಣಿಸಿದೆ ಎಂದು ಕಿಡಿಕಾರಿದ ಪುಟ್ಟೇಗೌಡ ಸರ್ಕಾರ ಖರೀದಿ ಕೇಂದ್ರಗಳನ್ನು ನಿರಂತರವಾಗಿ ತೆರೆಯುವ ಮೂಲಕ ದಳ್ಳಾಳಿಗಳನ್ನು ನಿಯಂತ್ರಿಸಬೇಕು. ರೈತರ ಹೆಸರಿನಲ್ಲಿ ದಳ್ಳಾಳಿಗಳೊಂದಿಗೆ ಶಾಮೀಲಾಗುವ ಖರೀದಿ ಕೇಂದ್ರದ ನೌಕರರ ವಿರುದ್ದ ಕ್ರಮ ಜರುಗಿಸಬೇಕು.
ಅಧಿಕಾರಿಗಳೊಂದಿಗೆ ಶಾಮೀಲಾಗಿ ಉಗ್ರಾಣದಿಂದ ಕಳಪೆ ಆಹಾರ ಧಾನ್ಯಗಳನ್ನು ತಂದು ಗ್ರಾಹಕರಿಗೆ ವಿತರಿಸುವ ನ್ಯಾಯ ಬೆಲೆ ಅಂಗಡಿಗಳ ಪರವಾನಿಗೆ ರದ್ದುಪಡಿಸಿ ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ವಿರುದ್ದ ಆಹಾರ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಪಡಿತರ ಗ್ರಾಹಕರಿಗೆ ಕಳಪೆ ರಾಗಿ ಪೂರೈಕೆಯ ಬಗ್ಗೆ ಪ್ರತಿಕ್ರಿಯಿಸಿರುವ ತಾಲೂಕು ಆಹಾರ ಇಲಾಖೆಯ ಶಿರಸ್ತೆದಾರ್ ಎ.ಎಲ್.ಪೂರ್ಣಿಮಾ ಗೋದಾಮಿನಿಂದ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ತರುವಂತೆ ಪ್ರತಿ ಮಾಸಿಕ ಸಭೆಯಲ್ಲೂ ನಾವು ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಸೂಚಿಸುತ್ತಿದ್ದೇವೆ. ನ್ಯಾಯ ಬೆಲೆ ಅಂಗಡಿಗಳ ಮೂಲಕ ಗ್ರಾಹಕರಿಗೆ ವಿತರಿಸುವ ಪ್ರತಿಯೊಂದು ಆಹಾರ ಪದಾರ್ಥದ ಮಾದರಿಯನ್ನು ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಇಟ್ಟಿರಬೇಕು. ಕಳಪೆ ಆಹಾರ ಪದಾರ್ಥಗಳಿದ್ದರೆ ಅದನ್ನು ಗ್ರಾಹಕರಿಗೆ ವಿತರಿಸದೆ ಹಿಂತಿರುಗಿಸಬೇಕು. ಬ್ಯಾಲದಕೆರೆ ನ್ಯಾಯ ಬೆಲೆ ಅಂಗಡಿಯಲ್ಲಿ ಕಲ್ಲು, ಮಣ್ಣು ಮತ್ತು ದೂಳು ಮಿಶ್ರಿತ ಕಳಪೆ ರಾಗಿ ವಿತರಣೆ ರೈತಸಂಘದ ಮೂಲಕ ನನ್ನ ಗಮನಕ್ಕೆ ಬಂದಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸುತ್ತೇನೆಂದು ರೈತ ಮುಖಂಡರಿಗೆ ಭರವಸೆ ನೀಡಿದರು.
ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆಯ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ತಹಸೀಲ್ದಾರ್ ನಿಸರ್ಗಪ್ರಿಯ ಸದರಿ ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ನ್ಯಾಯಬೆಲೆ ಅಂಗಡಿಗಳಿಗೆ ಭೆಟಿ ನೀಡಿ ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ ಎಂದಿದ್ದಾರೆ.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಶಿವಕುಮಾರ್, ಹೊನ್ನೇಗೌಡ, ಸ್ವಾಮೀಗೌಡ ಮತ್ತಿತರರಿದ್ದರು.