ಪಡಿತರ ಕಳ್ಳ ಸಾಗಣೆಯನ್ನು ತಡೆಯಲು ಕಾನೂನು ಕ್ರಮಕ್ಕೆ ಆಗ್ರಹ

ಮಾನ್ವಿ.ಏ.೦೧- ರಾಜ್ಯದಲ್ಲಿ ಪಡಿತರ ಕಳ್ಳಸಾಗಣಿಯನ್ನು ತಡೆಯಲು ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ತಹೀಸಿಲ್ದಾರ್ ಮುಖಾಂತರ ಆಹಾರ ಸಚಿವರಾದ ಉಮೇಶ್ ಕತ್ತಿ ಅವರಿಗೆ ಮನವಿ ಮೂಲಕ ಬಹುಜನ ಸಮಾಜ ಪಕ್ಷದ ರಾಯಚೂರು ಲೋಕಸಭಾ ಉಸ್ತುವಾರಿಗಳಾದ ಶ್ಯಾಮಸುಂದರ್ ಕುಂಬ್ದಾಳ್ ಆಗ್ರಹಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಆಹಾರ ಧಾನ್ಯಗಳ ಕಳ್ಳ ಸಾಗಣಿಕೆ ಪ್ರಕರಣಗಳು ಜರುಗುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಜನರ ಕೈಗೊಂಡ ಎಟುಕದಂತಾಗಿದೆ. ಕೋವಿಡ್-೧೯ ಸಂಕಷ್ಟದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರಿಗೆ ದುಡಿಯುವುದಕ್ಕೆ ಕೆಲಸಗಳಿಲ್ಲದೆ ಅನೇಕ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರ, ಮಧ್ಯಮ ವರ್ಗದ ಜನಗಳು ಪಡಿತರ ಆಹಾರ ಧಾನ್ಯವನ್ನು ಆಸ್ರಯಿಸಿ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರದ ನೆರವಿನಲ್ಲಿ ಉಚಿತ ಆಹಾರ, ಧಾನ್ಯಗಳನ್ನು ವಿತರಿಸುತ್ತಿದೆ. ಉಚಿತ ಪಡಿತರ ವಿತರಣೆಗಾಗಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ರಾಯಚೂರು ಜಿಲ್ಲೆಯಲ್ಲಿಯೂ ಕೂಡ ಪಡಿತರ ಅಕ್ರಮವು ನಿರಂತರವಾಗಿ ನಡೆಯುತ್ತಿರುವುದು ಇತ್ತೀಚಿಗೆ ಬೆಳಕಿಗೆ ಬಂದಿರುತ್ತದೆ. ಜುಲ್ಲೆಯದ್ಯಂತ ಪಡಿತರ ವಿತರಿಸುವ ವ್ಯವಸ್ಥೆಯನ್ನು ಚೆನ್ನಾಗಿ ಬಲ್ಲ ಅನೇಕರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಜಾಗಗಳಿಂದ ಸಮರ್ಪಕ ಆಹಾರ ವಿತರಣೆಗೆ ತೊಂದರೆಯುಂಟಾಗುವುದಲ್ಲದೇ ಬಡವರ ಆಹಾರವನ್ನು ಕಿತ್ತುಕೊಂಡಂತಾಗುತ್ತದೆ. ಭಾರತ ದೇಶದಲ್ಲಿರುವ ಪ್ರತಿಯೊಬ್ಬ ನಾಗರೀಕರಿಗೂ ಆಹಾರವನ್ನು ಒದಗಿಸುವ ಕಾಯ್ದೆ ಭಾರತ ಆಹಾರ ಕಾಯ್ದೆ ಜಾರಿಯಲ್ಲಿದ್ದರೂ ದೇಶದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆಹಾರ ಭದ್ರತೆಯನ್ನು ಒದಗಿಸುವ ಸರ್ಕಾರಗಳು ಬಡವರ ಪರವಾಗಿ ಆಹಾರ ಧಾನ್ಯಗಳನ್ನು ಒದಗಿಸುತ್ತೇವೆಯಾದರೂ ಅದನ್ನು ಸಮರ್ಪಕವಾಗಿ ವಿತರಣೆ ಮಾಡುವ ಗೋಜಿಗೆ ಹೋಗುತ್ತಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ನಿಯಮಾವಳಿಗಳ ಪ್ರಕಾರ ಕರ್ನಾಟಕ ಆಹಾರ ಮತ್ತು ನಾಗರೀಕರ ಪೂರೈಕೆ ನಿಗಮ ಅಥವಾ ಭಾರತೀಯ ಆಹಾರ ನಿಗಮದ ಉಗ್ರಾಣಗಳಿಂದ ಜಿ.ಪಿ.ಎಸ್ ಸಾಧನ ಅಳವಿಡಿಸಿದ ಲಾರಿಯಲ್ಲಿ ನಿಗಧಿತ ದಾಖಲಾತಿಯೊಂದಿಗೆ ತಾಲೂಕಾ ಮಟ್ಟದ ವಿತರಣಾ ಕೇಂದ್ರಗಳಿಗೆ ಪಡಿತರವನ್ನು ಸಾಗಿಸಬೇಕು. ಅಲ್ಲಿಂದ ಜಿ.ಪಿ.ಎಸ್ ಅಳವಡಿಸಿದ ವಾಹನದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಮಾಡಬೇಕು. ಉಗ್ರಾಣಗಳು, ವಿತರಣಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಆಹಾರ ದಾಸ್ತುಗಳ ವಿತರಣೆ ಮತ್ತು ಸಾಗಣೆ ಪ್ರಕ್ರಿಯೆ ನಡೆಯಬೇಕು. ಆದರೆ ಬಹುತೇಕ ಉಗ್ರಾಣಗಖು ವಿತರಣಾ ಕೇಂದ್ರದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ. ಆಹಾರ ಧಾನ್ಯಗಳ ಸಾಗಟು, ಸಾಗಣಿಕೆ, ಗುತ್ತಿಗೆ ಪಡೆದಿರುವವರ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.
ಕೂಡಲೇ ಉಗ್ರಾಣಗಳಲ್ಲಿ ಪಡಿತರ ಆಹಾರ ಧಾನ್ಯಗಳ ಸಂಗ್ರಹದಲ್ಲಿ ಸ್ವಚ್ಚತೆ ಕಾಪಾಡಬೇಕು, ಆಹಾರ ಧಾನ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು, ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಸ್ವಂತ ಕಟ್ಟಡಕ್ಕೆ ಧನ ಸಹಾಯ ನೀಡಬೇಕು, ಸರ್ಕಾರದ ಸ್ವಂತ ಗೋದಾಮು ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಬೇಕು ಮತ್ತು ಹೈಟೆಕ ಉಗ್ರಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹನುಮಂತರಾಯ ವಕೀಲರು ಕಪಗಲ್, ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಗಲಿ, ತಾಲೂಕಾ ಅಧ್ಯಕ್ಷ ಎಂ.ಡಿ ಇಮಾಮಸಾಬ, ತಾಲೂಕಾ ಕಾರ್ಯದರ್ಶಿ ಚಂದ್ರಶೇಖರ.ಬಿ, ಪದಾಧಿಕಾರಿ ಬಸವರಾಜ ದೇವರಮನಿ ಹಿರೇಕೊಟ್ನೆಕಲ್, ರಮೇಶ್ ನಾಯಕ್, ಅಬ್ದುಲ್ ಹಮೀದ್ ಸೇರಿದಂತೆ ಅನೇಕರು ಇದ್ದರು.