ಪಡಿತರ ಕಡಿತ ಆದೇಶ ರದ್ಧತಿಗೆ ಆಗ್ರಹ

ಕೋಲಾರ,ಏ.೭: ಪಡಿತರ ಅಕ್ಕಿ ಕಡಿತದ ಆದೇಶವನ್ನು ವಾಪಸ್ಸು ಪಡೆದು, ಪ್ರತಿ ಸದಸ್ಯರಿಗೆ ೧೦ ಕೆ.ಜಿ. ಅಕ್ಕಿ, ೧೦ ಕೆ.ಜಿ. ರಾಗಿಯನ್ನು ವಿತರಣೆ ಮಾಡಿ, ಕೊರೊನಾ ಸಂಕಷ್ಟದಲ್ಲಿರುವ ಬಡವರ ರಕ್ಷಣೆಗೆ ನಿಲ್ಲಬೇಕೆಂದು, ತಾಲ್ಲೂಕು ಆಹಾರ ನಿರೀಕ್ಷಕರ ಮುಖಾಂತರ, ಆಹಾರ ಮಂತ್ರಿಗೆ ರೈತ ಸಂಘದಿಂದ ಮನವಿ ನೀಡಿಲಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯಾದ್ಯಂತ ಸರ್ಕಾರ ಬೆಂಬಲ ಬೆಲೆ ನೀಡಿ ರಾಗಿ, ಖರೀದಿ ಮಾಡಿ, ಅದೇ ರಾಗಿಯನ್ನು ರೈತರಿಗೆ ಪಡಿತರ ಅಕ್ಕಿ ಜೊತೆಯಲ್ಲಿ ವಿತರಣೆ ಮಾಡುವ ಸರ್ಕಾರಕ್ಕೆ ಧನ್ಯವಾದ. ಆದರೆ ರಾಗಿ ಕೊಟ್ಟು ಅಕ್ಕಿಯನ್ನು ೨ ಕೆಜಿ.ಗೆ ಕಡಿತ ಮಾಡಿರುವುದು ಯಾವ ನ್ಯಾಯವೆಂದು ಸರ್ಕಾರದ ಜನ ವಿರೋಧಿ ನೀತಿಗೆ ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ ಮಾತನಾಡಿ, ಕಣ್ಣಿಗೆ ಕಾಣದ ವೈರಸ್ ಅಟ್ಟಹಾಸ ಒಂದು ಕಡೆಯಾದರೆ, ಮತ್ತೊಂದರ ಕಡೆ ಕೇಂದ್ರ ಸರ್ಕಾರದ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಮದ್ಯಮ ವರ್ಗದ ಜನ ಸಾಮಾನ್ಯರು ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದ್ದ ೫ ಕೆ.ಜಿ ಪಡಿತರ ಅಕ್ಕಿ ಕಡಿತ ಮಾಡಿರುವ ಸಮಯದಲ್ಲಿ, ರಾಜ್ಯ ಸರ್ಕಾರ ೩ ಕೆ.ಜಿ. ಕಡಿತ ಮಾಡಿ ಆದೇಶ ಮಾಡಿರುವುದು ಬಡವರ ಅನ್ನ ಕಿತ್ತುಕೊಳ್ಳುವ ಮುಖಾಂತರ ಜನ ವಿರೋಧಿ ನೀತಿಯನ್ನುಅನುಸರಿಸುತ್ತಿವೆಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ,ಕಟ್ಟಕಡೆಯ ಪ್ರಜೆಯು ಹಸಿವಿನಿಂದ ಹಾಗೂ ಅಪೌಷ್ಠಿಕತೆಯಿಂದ ನರಳಬಾರದು ಎಂಬ ಉದ್ದೇಶದಿಂದ ಪಡಿತರ ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಗಳ ಮುಖಾಂತರ ವಿತರಣೆ ಮಾಡುತ್ತಿತ್ತು. ಆದರೆ ಒಂದೊಂದು ಸರ್ಕಾರ ಒಂದೊಂದು ರೀತಿ ಆದೇಶ ಮಾಡುವ ಮೂಲಕ ಬಡವರ ಅನ್ನವನ್ನು ಕಿತ್ತುಕೊಳ್ಳುತ್ತಿದೆ ಎಂದು ಅಸಮದಾನ ವ್ಯಕ್ತಪಡಿಸಿದರು. ಜೊತೆಗೆ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಜನ ಸಾಮಾನ್ಯರ ಜೀವನಕ್ಕೆ ತೊಂದರೆಯಾಗದ ರೀತಿ ಮೊದಲು ನೀಡುತ್ತಿದ್ದ, ಪಡಿತರ ಅಕ್ಕಿಯ ಆದೇಶವನ್ನು ಮುಂದುವರೆಸುವಂತೆ ಮಾನ್ಯ ಆಹಾರ ಮಂತ್ರಿಗಳಿಗೆ ಒತ್ತಾಯ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಆಹಾರ ನಿರೀಕ್ಷಕರು, ಹಿಂದಿನ ವರ್ಷ ರಾಗಿ ಬೆಳೆ ಸಮೃದ್ದವಾಗಿ ಬೆಳೆದಿದ್ದು, ನಿರೀಕ್ಷೆಗೂ ಮೀರಿ ರಾಗಿ ಖರೀದಿಯಾಗಿದೆ. ರಾಗಿಯನ್ನು ೩ ಕೆ.ಜಿ. ಅಕ್ಕಿಯನ್ನು, ೨ ಕೆ.ಜಿ. ನೀಡುವ ಆದೇಶವನ್ನು ಸರ್ಕಾರ ನೀಡಿದೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ
ತಲುಪಿಸುವ ಭರವಸೆಯನ್ನು ನೀಡಿದರು.
ಈ ವೇಳೆ ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನ, ಹ.ಸೇ.ಜಿಲ್ಲಾಧ್ಯಕ್ಷಕಿರಣ್, ಚಾಂದ್‌ಪಾಷ, ಜವೀದ್‌ಪಾಷ, ಕಿರಣ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಕೊಮ್ಮನಹಳ್ಳಿ ಚಂದ್ರಪ್ಪ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಚಲಪತಿ ಹಾಗೂ ಇತರರು ಉಪಸ್ಥಿತರಿದ್ದರು.