ಪಡಿತರ ಅಕ್ಕಿ ಅವಾಂತರ : ಪ್ಲಾಸ್ಟಿಕ್ ಅಕ್ಕಿಯ ಗೊಂದಲ – ಸಿಂಗನೋಡಿ ಗ್ರಾಮದ ಜನರಲ್ಲಿ ಆತಂಕ

ಬೆಂಕಿಗೆ ಕರಗುವ ಅಕ್ಕಿಕಾಳು : ಸಾಮಾಜಿಕ ಜಾಲತಾಣದಲ್ಲಿ ವೈರಲ್ – ‘ಸಾದವಾರ್ದಿತ‘ ಅಕ್ಕಿ ಎಂದು ಡಿಡಿ ಸ್ಪಷ್ಟನೆ
ರಾಯಚೂರು.ಜು.೧೯- ಒಂದೆಡೆ ತಿನ್ನುವ ಆಹಾರಕ್ಕೆ ಕೇಂದ್ರ ಜಿಎಸ್‌ಟಿ ವಿಧಿಸಿ ಬಡವರು ದುಬಾರಿ ಬದುಕಿನಿಂದ ತತ್ತರಿಸುವಂತೆ ಮಾಡಿದ್ದರೆ, ಮತ್ತೊಂದೆಡೆ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯ ಕಲಬೆರಿಕೆ ಗ್ರಾಮೀಣ ಜನರು ಅನ್ನ ತಿನ್ನಲು ಭಯಭೀತಗೊಳ್ಳುವಂತೆ ಮಾಡಿದ ಘಟನೆ ತೆಲಂಗಾಣ ಗಡಿ ಭಾಗದಲ್ಲಿರುವ ಸಿಂಗನೋಡಿ ಗ್ರಾಮದಲ್ಲಿ ಪತ್ತೆಯಾಗಿದೆ.
ನ್ಯಾಯಬೆಲೆ ಅಂಗಡಿಯಿಂದ ಪಡೆದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಪತ್ತೆ ಮಾಡಿದ ಅಲ್ಲಿಯ ಜನ ಕಳೆದ ಮೂರು ದಿನಗಳಿಂದ ತೀವ್ರ ತಳಮಳಕ್ಕೆ ಗುರಿಯಾಗಿದ್ದಾರೆ. ಸಾಮಾನ್ಯ ಅಕ್ಕಿಗೆ ಹೊಲಿಸಿದರೆ ಭಿನ್ನವಾಗಿರುವ ಮತ್ತು ಬೆಂಕಿಗೆ ಪ್ಲಾಸ್ಟಿಕ್‌ನಂತೆ ಕರಗುವ ಈ ಅಕ್ಕಿ ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ ಈ ಪ್ಲಾಸ್ಟಿಕ್ ಅಕ್ಕಿಯ ಬಗ್ಗೆ ಮಾಧ್ಯಮಗಳು ಗ್ರಾಮಕ್ಕೆ ಭೇಟಿ ನೀಡಿಪರಿಶೀಲಿಸಿದಾಗ ಅಕ್ಕಿ ಬೆಂಕಿಗೆ ಕರಗುವುದನ್ನು ಕಂಡು ಅಚ್ಚರಿ ಮೂಡಿಸಿತ್ತು.
ಸಿಂಗನೋಡಿ ಗ್ರಾಮದ ಜನರು ಅಕ್ಕಿಯನ್ನು ಮುಂದಿಟ್ಟುಕೊಂಡು ಅನೇಕ ವಿಧಗಳಲ್ಲಿ ಪರೀಕ್ಷೆ ನಡೆಸಿದ್ದಾರೆ. ಕೈಗಳಲ್ಲಿ ಅತ್ಯಂತ ಬಲವಾಗಿ ಉಜ್ಜಿದರೂ ಅಕ್ಕಿ ಮುರಿಯದಿರುವುದು, ನೀರಿನಲ್ಲಿ ತೇಲುವುದು, ಬೆಂಕಿಗೆ ಸಾಮಾನ್ಯ ಅಕ್ಕಿಗಿಂತ ಭಿನ್ನ ರೀತಿಯಲ್ಲಿ ಕರಗುವುದನ್ನು ಕಂಡ ಜನ ಈ ಅಕ್ಕಿಯ ಅನ್ನ ತಿನ್ನಲು ಹೆದರುವಂತೆ ಮಾಡಿದೆ. ಕಳೆದ ಮೂರು ದಿನಗಳಿಂದ ಈ ಅನ್ನ ಬಳಸಿದವರು ಈಗ ಇದರ ಪರಿಣಾಮ ಏನಾಗಬಹುದೆಂಬ ಆತಂಕಕ್ಕೆ ಗುರಿಯಾಗಿದ್ದಾರೆ. ಪ್ರಸ್ತುತ ಈ ರೀತಿಯ ಅಕ್ಕಿ ಸಿಂಗನೋಡಿ ಗ್ರಾಮದಲ್ಲಿ ಪತ್ತೆಯಾಗಿದೆ.
ಆದರೆ, ಪಡಿತರ ಅಕ್ಕಿ ವಿತರಣೆ ಎಲ್ಲೆಡೆ ಕೈಗೊಂಡಿದ್ದರಿಂದ ಇಂತಹ ಅವಘಡಗಳು ಎಲ್ಲಿಯಾದರೂ ಸಂಭವಿಸಿಯೆ ಎನ್ನುವ ಪರಿಶೀಲನೆ ನಡೆಯಬೇಕಾಗಿದೆ. ಗ್ರಾಮಾಂತರ ಪ್ರದೇಶದಳಲ್ಲಿ ವಿವಿಧ ಕಂಪನಿಗಳ ನಕಲಿ ವಸ್ತುಗಳನ್ನು ಮಾರಾಟ ಮಾಡುವ ರೀತಿಯಲ್ಲಿ ಪಡಿತರ ಅಕ್ಕಿಯಲ್ಲೂ ಪ್ಲಾಸ್ಟಿಕ್ ಅಕ್ಕಿ ಸೇರಿಸಿ ಮಾರಾಟ ಮಾಡಲಾಗುತ್ತಿದೆಯೆ ಎನ್ನುವ ಶಂಕೆ ತೀವ್ರಗೊಳ್ಳುವಂತೆ ಮಾಡಿದೆ. ಪ್ಲಾಸ್ಟಿಕ್ ಅಕ್ಕಿ ಮಾರಾಟಕ್ಕೆ ಸಂಬಂಧಿಸಿ ಈ ಹಿಂದೆ ಅನೇಕ ಸಲ ವಿವಾದಗಳು ತಲೆಯೆತ್ತಿದ್ದವು. ಆದರೆ, ಪ್ರತ್ಯಕ್ಷವಾಗಿ ಜನರು ಇದನ್ನು ನೋಡಿರಲಿಲ್ಲ. ಆದರೆ, ಸಿಂಗನೋಡಿಯಲ್ಲಿ ಸಿಕ್ಕಂತಹ ಅಕ್ಕಿಯಲ್ಲಿ ಸಾಮಾನ್ಯ ಅಕ್ಕಿಗಿಂತ ಭಿನ್ನವಾಗಿರುವ ಅಕ್ಕಿ ಕಾಳುಗಳು ಗ್ರಾಮೀಣ ಜನರ ಮಾತ್ರವಲ್ಲ, ನಗರದ ಜನರನ್ನು ತಳಮಳಕ್ಕೆ ಗುರಿ ಮಾಡಿದೆ.
ಪಡಿತರ ಅಕ್ಕಿ ಮಾರಾಟದಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತವೆ. ಆಹಾರ ಮತ್ತು ಸರಬರಾಜು ಇಲಾಖೆಯಿಂದ ನೀಡುವ ಅಕ್ಕಿಯಲ್ಲಿ ಭಾರೀ ಗೋಲ್ ಮಾಲ್ ನಡೆದ ಬಗ್ಗೆ ದಾಖಲೆಗಳಿವೆ. ಈಗ ಜನರು ತಿನ್ನುವ ಅಕ್ಕಿಯಲ್ಲೂ ಪ್ಲಾಸ್ಟಿಕ್ ಬೆರೆಸುವ ಅಕ್ರಮ ನಡೆಯುತ್ತಿದೆಯೆ ಎನ್ನುವ ಶಂಕೆ ಮೂಡುವಂತಾಗಿದೆ. ಕಳೆದ ಮೂರು ದಿನಗಳಿಂದ ಪ್ಲಾಸ್ಟಿಕ್ ಮಾದರಿಯ ಅಕ್ಕಿಯ ಅನ್ನ ಮಾಡಿದ ಕೆಲವೇ ಕ್ಷಣಗಳಲ್ಲಿ ಅಳಸುತ್ತಿರುವುದು ಜನರಲ್ಲಿ ಅನುಮಾನ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಈ ಅಕ್ಕಿಯ ಬಗ್ಗೆ ಆಹಾರ ಇಲಾಖೆಗೆ ದೂರು ನೀಡಲಾಗಿದೆ.
ಗ್ರಾಹಕರೊಬ್ಬರು ನಾಗರಿಕ ಆಹಾರ ಮತ್ತು ಸರಬರಾಜು ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಿ, ಸಿಂಗನೋಡಿ ಗ್ರಾಮದಲ್ಲಿ ಸಿಕ್ಕ ಪ್ಲಾಸ್ಟಿಕ್ ಅಕ್ಕಿ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿಯಲ್ಲಿ ಉತ್ತರಿಸಿದ್ದಾರೆ. ಇದು ‘ಸಾದವಾರ್ದಿತ‘ ಅಕ್ಕಿಯಾಗಿದ್ದು, ಜನರಲ್ಲಿ ಪೌಷ್ಟಿಕತೆ ಹೆಚ್ಚಿಸಲು ಈ ಅಕ್ಕಿಯನ್ನು ಸಾಮಾನ್ಯ ಅಕ್ಕಿಯೊಂದಿಗೆ ಬೆರೆಸಲಾಗುತ್ತದೆ. ಪ್ಲಾಸ್ಟಿಕ್ ಅಕ್ಕಿ ಎಲ್ಲಿಯೂ ವಿತರಿಸಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಜನರಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ ಎನ್ನುವ ಸ್ಪಷ್ಟನೆ ನೀಡಿದ್ದಾರೆ. ಆದರೆ, ಅನ್ನ ಮಾಡಿದ ಕೆಲವೇ ಕ್ಷಣಗಳಲ್ಲಿ ಅಳಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಜನರು ಅದನ್ನು ಕುದಿಸುವ ವಿಧಾನ ಅವಲಂಬಿಸುತ್ತದೆಂದು ಪ್ರತಿಕ್ರಿಯಿಸಿದ್ದಾರೆ.
೧೪ ಜಿಲ್ಲೆಗಳಲ್ಲಿ ಈ ಅಕ್ಕಿ ಸರಬರಾಜು ಆಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಅನ್ನ ಅಳಸಿದೆಯೆ?, ಕಳೆದ ಎರಡು ತಿಂಗಳಿಂದ ಈ ಅಕ್ಕಿ ನೀಡಲಾಗುತ್ತಿದೆ. ಎಲ್ಲಿಯೂ ಯಾವುದೇ ಸಮಸ್ಯೆಯಾಗಿಲ್ಲವೆಂದು ಅವರು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ ಗೊಂದಲವನ್ನು ಯಾವ ರೀತಿಯಲ್ಲಿ ನಿವಾರಿಸಲಾಗುತ್ತದೆ ಎನ್ನುವುದು ಮತ್ತೊಂದು ಪ್ರಶ್ನೆಯಾಗಿದೆ.