ಪಡಿತರ ಅಕ್ಕಿಯಲ್ಲಿ ಕಲಬೆರಕೆ

ಮಧುಗಿರಿ, ಜು. ೩೦- ತಾಲ್ಲೂಕಿನ ಕೆಲವೆಡೆ ಪಡಿತರ ಅಕ್ಕಿಯಲ್ಲಿ ಕಲಬೆರಕೆ ಉಂಟಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ತಹಶೀಲ್ದಾರ್ ಸುರೇಶಾಚಾರ್ ಭೇಟಿ ನೀಡಿ ಅಕ್ಕಿಯನ್ನು ಪರೀಕ್ಷಿಸಿ ಗ್ರಾಹಕರಿಗೆ ವಿತರಿಸದಂತೆ ಸೂಚನೆ ನೀಡಿದ ಘಟನೆ ತಾಲ್ಲೂಕಿನ ಮರುವೇಕೆರೆ ವಿಎಸ್‌ಎಸ್‌ಎನ್‌ನಲ್ಲಿ ನಡೆದಿದೆ.
ಪಡಿತರ ವಿತರಣೆ ವೇಳೆ ಅಕ್ಕಿಯಲ್ಲಿ ಲೋಪವಿರುವುದು ಕಂಡುಬಂದಿದ್ದು, ಅಕ್ಕಿಯನ್ನು ನೆನೆಸಿದಾಗ ಅಕ್ಕಿ ತೇಲುತ್ತಿತ್ತು. ಆ ತೇಲುವ ಅಕ್ಕಿ ರಬ್ಬರಿನ ಅಂಶದಂತೆ ಕೂಡಿದ್ದು ಇದರಿಂದ ಆರೋಗ್ಯಕ್ಕೆ ಹಾನಿಕರವಾಗಲಿದೆ ಎಂದು ಭಯಗೊಂಡು ಗ್ರಾಮಸ್ಥರು ತಹಶೀಲ್ದಾರ್‌ಗೆ ದೂರು ನೀಡಿದ್ದರು. ಅದರಂತೆ ಮರುವೇಕೆರೆ ವಿ ಎಸ್‌ಎಸ್‌ಎನ್‌ಗೆ ಭೇಟಿ ನೀಡಿದ ತಹಶೀಲ್ದಾರ್ ಸುರೇಶಾಚಾರ್ ಅಕ್ಕಿಯನ್ನು ಪರೀಕ್ಷಿಸಿ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಸೂಚಿಸಿ ವರದಿ ಬಂದ ನಂತರ ಅಕ್ಕಿಯನ್ನು ಪಡಿತರದಾರರಿಗೆ ವಿತರಣೆ ಮಾಡುವಂತೆ ತಿಳಿಸಿದರು.
ಆಹಾರ ಇಲಾಖೆಯ ಗಣೇಶ್ ಮಾತನಾಡಿ, ತಾಲ್ಲೂಕಿನ ಅಂಗನವಾಡಿ ಮತ್ತು ಎಂಜಿಎಂ ಶಾಲೆಗಳಿಗೆ ಈ ಅಕ್ಕಿಯನ್ನು ನೀಡಿದ್ದು, ಈ ಅಕ್ಕಿ ಸಾರ್ವತ್ರಿಕ ಅಕ್ಕಿಯಾಗಿದ್ದು, ಯಾವುದೇ ಕಲಬೆರಕೆಯಾಗಿಲ್ಲ. ಅದರೂ ಗ್ರಾಮಸ್ಥರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೋಸ್ಕರ ಕಳುಹಿಸಲಾಗಿದ್ದು ವರದಿ ಬಂದ ನಂತರ ವಿತರಿಸಲಾಗುವುದು ಎಂದು ತಿಳಿಸಿದರು.
ವಿ.ಎಸ್.ಎಸ್.ಎನ್ ಸದಸ್ಯ ಹಾಗೂ ಮರುವೇಕೆರೆ ಗ್ರಾ.ಪಂ. ಸದಸ್ಯ ಬಂದ್ರೇಹಳ್ಳಿ ಮಂಜುನಾಥ್ ಮಾತನಾಡಿ,ಗ್ರಾಮದ ವಿಎಸ್‌ಎಸ್‌ಎನ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾರ್ಡುದಾರರಿದ್ದು, ಈಗ ನೀಡಿರುವ ಅಕ್ಕಿಯಲ್ಲಿ ಲೋಪ ಕಂಡು ಬಂದಿದ್ದು, ಜನರ ಆರೋಗ್ಯಕ್ಕೆ ಹಾನಿಯಾಗುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮರುವೇಕೆರೆ ಗ್ರಾಮದ ಪಡಿತರ ಕೇಂದ್ರದಲ್ಲಿ ಕಲಬೆರಕೆ ಅಕ್ಕಿ ವಿತರಣೆಯಾಗಿದೆ ಎಂಬ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಅಕ್ಕಿಯ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಅಲ್ಲಿಯವರೆಗೂ ಅಕ್ಕಿ ಬಳಸದಂತೆ ಸೂಚಿಸಲಾಗಿದ್ದು, ವರದಿ ಬಂದ ನಂತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಸುರೇಶಾಚಾರ್ ತಿಳಿಸಿದ್ದಾರೆ.