ಪಡಿತರ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಒತ್ತಾಯಿಸಿ ಆಗ್ರಹ

ರಾಯಚೂರು, ಜು.೨೧- ನ್ಯಾಯಬೆಲೆ ಅಂಗಡಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿ ಅಕ್ಕಿಯನ್ನು ಕಲಬೆರಿಕೆ ಮಾಡಿರುವ ಹಿನ್ನಲೆ ಸಾವಿರಾರು ಕುಟುಂಬಗಳು ಆತಂಕಕ್ಕೀಡಾಗಿರುವ ಹಿನ್ನಲೆ ತಕ್ಷಣವೇ ಈ ಪಡಿತರ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ವರದಿ ಬಂದ ನಂತರ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಹಾರ ಇಲಾಖೆಯಿಂದ ಇತ್ತೀಚೆಗೆ ಮೇ ಮತ್ತು ಜೂನ್ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯಲ್ಲಿ ಎಂದಿನಂತೆ ಪಡಿತರ ಅಕ್ಕಿಯನ್ನು ವಿತರಿಸುತ್ತಿರುವುದು ಸರಿ.ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶದಂತೆ ನ್ಯಾಯಬೆಲೆ ಅಂಗಡಿ ಮೂಲಕ ಜನರಿಗೆ ಪೌಷ್ಠಿಕತೆ ಹೆಚ್ಚಿಸುವ ಸಾರವಾರ್ದಿಕ ಅಕ್ಕಿಯನ್ನು ಪಡಿತರ ಅಕ್ಕಿಯೊಂದಿಗೆ ಬೆರಸಿ ರಾಜ್ಯದಾದ್ಯಂತ ನೀಡಲಾಗುತ್ತಿದೆಂದು ರಾಯಚೂರು ಆಹಾರ ಇಲಾಖೆಯ ಉಪನಿರ್ದೇಶಕ ಅರುಣ ಕುಮಾರ ಸಂಗಾವಿ ಹೇಳಿಕೆ ನೀಡಿದ್ದಾರೆ.ಆದರೆ ಕಳೆದ ಎರಡು ತಿಂಗಳಿನಿಂದ ಸರ್ಕಾರದ ಮಹತ್ತರ ಯೋಜನೆಯನ್ನು ಜನರಿಗೆ ಪೌಷ್ಟಿಕತೆ ಹೆಚ್ಚಿಸುವ ಪ್ರಯುಕ್ತ ಪ್ರತಿ ತಿಂಗಳು ಹಂಚಿಕೆ ಮಾಡುತ್ತಿರುವ ಪಡಿತರ ಆಕ್ಕಿಯ ಜೊತೆ ಸಾರವಾರ್ದಿಕ ಆಕ್ಕಿಯನ್ನು ಬೆರಸಿ ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಜನಸಾಮಾನ್ಯರಿಗೆ ಅರಿವು ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದರಿಂದ ಜನಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ ದೂರಿದರು.
ಪಡಿತರ ಅಕ್ಕಿಯಲ್ಲಿ ಸಾರವಾರ್ದಿಕ ಆಕ್ಕಿಯನ್ನು ಬೆರಸಲಾಗಿದೆ ಎಂದು ಹೇಳುತ್ತಿರುವುದು ಅನುಮಾನಕ್ಕೀಡಾಗಿದೆ. ಈಗಾಗಲೇ ಈ ಇಲಾಖೆಯ ಅಧಿಕಾರಿಗಳಾದ ಆರುಣ ಕುಮಾರ ಸಂಗಾವಿ , ಬಿ.ಆರ್ . ವೆಂಕಣ್ಣ ರವರು ಸುಮಾರು ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದಲ್ಲದೇ ಇವರುಗಳ ವಿರುದ್ಧ ನೂರಾರು ದೂರುಗಳು ಇದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿರುವುದಿಲ್ಲ.ಜೊತೆಗೆ ಇವರ ಅಧಿಕಾರವಧಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಗಳು ಹಲವಾರು ರೈಸ್ ಮಿಲ್‌ಗಳಲ್ಲಿ ಸಿಕ್ಕಿಬಿದ್ದರೂ ಸಹ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ರಾಯಚೂರು ಜನತೆಗೆ ಇವರ ಮೇಲೆ ಅನುಮಾನ ದಟ್ಟವಾಗಿರುತ್ತದೆ.ಪಡಿತರ ಸಾಗಾಣಿಕೆ ಗುತ್ತಿಗೆದಾರ ಕುಂಟನಾಳ ವೆಂಕಟೇಶ ಸುಮಾರು ವರ್ಷಗಳಿಂದ ಗುತ್ತಿಗೆ ಪಡೆದು ಸಾಗಾಣಿಕೆ ಮಾಡುತ್ತಿರುವುದು ಈ ಮೇಲಿನ ಅಧಿಕಾರಿಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ಸರ್ಕಾರದ ಸಾರವಾರ್ದಿಕ ಅಕ್ಕಿಯ ಬದಲು ಚೀನಾ ಮೂಲದ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.ಹಾಗಾಗಿ ಪಡಿತರ ಅಕ್ಕಿಯಿಂದ ಜನಸಾಮಾನ್ಯರ ಆತಂಕವನ್ನು ದೂರ ಮಾಡಲು ತಕ್ಷಣವೇ ಈ ಅಕ್ಕಿಯನ್ನು ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆಗೊಳಪಡಿಸಿ ವರದಿ ಬಂದನಂತರ ಜನರಿಗೆ ಪಡಿತರ ಅಕ್ಕಿಯನ್ನು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ ಯಾದವ್,
ಈ ಸಂದರ್ಭದಲ್ಲಿ ಕರುಣಾಕರ ರೆಡ್ಡಿ ಗುಂಜಳ್ಳಿ,ಮುರಳಿ ಕೃಷ್ಣ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.