ಪಡಿಕ್ಕಲ್ ಶತಕ;ಆರ್ ಸಿಬಿಗೆ 10 ವಿಕೆಟ್ ಗಳ ಭರ್ಜರಿ ಜಯ:ಐಪಿಎಲ್ ನಲ್ಲಿ 6000 ರನ್ ಪೂರೈಸಿದ ಕೊಹ್ಲಿ

ಮುಂಬೈ, ಏ. 22- ದೇವದತ್ ಪಡಿಕ್ಕಲ್‌ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿಯವರ‌ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಾಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿಬಿ 10 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿತು.


ಇದರೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯ ಗೆಲ್ಲುವ ಮೂಲಕ ಜಯದ ನಾಗಲೋಟವನ್ನು ಕೊಹ್ಲಿ ಪಡೆ ಮುಂದುವರೆಸಿತು.
178 ರನ್ ಗಳ ಗೆಲುವಿನ‌ ಗುರಿಯನ್ನು ಬೆನ್ನಹತ್ತಿದ
ಆರ್ ಸಿಬಿ, ಪಡಿಕ್ಕಲ್ ಮತ್ತು ಕೊಹ್ಲಿ ರಾಜಸ್ಥಾನ ಬೌಲಿಂಗ್ ದಾಳಿಯನ್ನು ಹಿಗ್ಗಾಮುಗ್ಗಾ ಥಳಿಸಿದರು. 16.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸಿ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿತು.
ಪಡಿಕ್ಕಲ್ 52 ಎಸೆತಗಳಲ್ಲಿ 11 ಬೌಂಡರಿ ಹಾಗೂ‌‌ ಆರು ಭರ್ಜರಿ ಸಿಕ್ಸರ್ ಸಿಡಿಸಿ 101 ರನ್ ಗಳಿಸಿದರು.
ಮತ್ತೊಂದೆಡೆ ನಾಯಕ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿ 72 ರನ್ ಗಳಿಸಿದರು.

ಐಪಿಎಲ್ ನಲ್ಲಿ 6000 ರನ್ ಪೂರೈಸಿದ ಕೊಹ್ಲಿ


ಅಲ್ಲದೆ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ‌ 6000 ರನ್ ಪೂರೈಸಿದ ಮೊದಲ ಆಟಗಾರ ಎನಿಸಿದರು.
ನಾಲ್ಕು ಪಂದ್ಯಗಳನ್ನು ಗೆದ್ದು ಎಂಟು ಅಂಕಗಳಿಸಿ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 9 ವಿಕೆಟ್‌‌ ಕಳೆದುಕೊಂಡು 177ರನ್ ಗಳ ಸವಾಲಿನ ಮೊತ್ತ ಗಳಿಸಿತು.
43 ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿತ್ತು.
ಆದರೆ ಶಿವಂದುಬೆ 32 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರೆ, ರಾಹುಲ್ ಥೆವಾಟಿಯಾ 23 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಸುಸ್ಥಿತಿಯತ್ತ ಕೊಂಡೊಯ್ದರು. ರಿಯಾನ್ ಪರಾಗ್ 25 , ಸಂಜು ಸ್ಯಾಮ್ಸನ್ 21 ರನ್ ಗಳಿಸಿದರು.ಉಳಿದ ಆಟಗಾರರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು‌ ವಿಫಲರಾದರು.
ಆರ್ ಸಿಬಿ ಪರ ಮಹ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ತಲಾ ಮೂರು ವಿಕೆಟ್ ಪಡೆದರು.