ಪಡಸಲನತ್ತ ಗ್ರಾಮದಲ್ಲಿ ಕೋವಿಡ್ ಲಸಿಕಾ ಉತ್ಸವ, ಜಾಗೃತಿ

ಹನೂರು:ಏ:21: ಮಲೆಮಹದೇಶ್ವರ ಬೆಟ್ಟ ದಲ್ಲಿರುವ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿ ಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಪಡಸಲನತ್ತ ಗ್ರಾಮಕ್ಕೆ ಭೇಟಿ ನೀಡಿ ಕೋವಿಡ್-19 ಲಸಿಕಾ ಉತ್ಸವ ಅಂಗವಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಇದೇ ವೇಳೆ ಮಾತನಾಡಿದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ದೇಶಾದ್ಯಂತ ಕರೋನ ಮಹಾಮಾರಿಗೆ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಬೇಕು ಎಂದು ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರು ಮಾತನಾಡಿ, ಕಳೆದ ಒಂದು ವಾರದ ಹಿಂದೆ ಬಿದ್ದ ಮಳೆಗೆ ಮಣ್ಣಿನರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು ಸಂಚಾರ ಮಾಡಲು ತುಂಬಾ ಕಷ್ಟಕರವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ರಸ್ತೆ ನಿರ್ಮಾಣ ಮಾಡಿಸಿ ಕೊಡಬೇಕು, ಪಡಿತರ ಪದಾರ್ಥಗಳನ್ನು ಪಡೆಯಲು ಹತ್ತಾರು ಕಿಲೋಮೀಟರ್ ನಡೆದು ಪಡಿತರ ಪದಾರ್ಥಗಳನ್ನು ಪಡೆಯಬೇಕಿದೆ, ಗ್ರಾಮದಲ್ಲಿ ಸೋಲಾರ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಎರಡೆರಡು ದಿನಕ್ಕೂ ದುರಸ್ತಿಯಾಗುತ್ತಿದೆ ಆದ್ದರಿಂದ ತಾವು ಇತ್ತ ಗಮನ ಹರಿಸಿ ಶಾಶ್ವತ ಪರಿಹಾರ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಗ್ರಾಮಸ್ಥರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮಿರವರು ಸ್ಥಳದಲ್ಲಿಯೇ ದೂರವಾಣಿ ಮೂಲಕ ಸೆಸ್ಕಾಂನ ಕಾರ್ಯಪಾಲಕ ಅಭಿಯಂತರಾದ ಪ್ರೀತಮ್‍ರವರ ಗಮನಕ್ಕೆ ತಂದರು. ಅವರೂ ತಕ್ಷಣವೇ ಸಂಬಂಧಿಸಿದವರಿಗೆ ದುರಸ್ತಿ ಕಾರ್ಯಕ್ಕೆ ನಿರ್ದೇಶನ ನೀಡಿದರು.
ಕಚ್ಚಾ ರಸ್ತೆಯ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮ.ಬೆಟ್ಟಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಕುಮಾರ್, ಮುಖಂಡ ಮುರುಗೇಶ್ ಶಿಕ್ಷಕ ನಾಗಣ್ಣ ಮತ್ತಿತರರು ಹಾಜರಿದ್ದರು.