
ಸಂಜೆವಾಣಿ ವಾರ್ತೆ
ದಾವಣಗೆರೆ.ನ.3.: ವಿದ್ಯಾರ್ಥಿಗಳು ತಮ್ಮ ಪದವಿಯ ಜೀವನದಲ್ಲಿ ಪಠ್ಯಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಎನ್ ಎಸ್ ಎಸ್ ಎನ್ ಸಿ ಸಿ ರೋವರ್ ರೇಂಜರ ರೆಡ್ ಕ್ರಾಸ್ ಹಾಗೂ ಇತರೆ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಬಂದರೆ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬಹುದು ಎಂದು ಎಸ್ ಎಸ್ ಕೇರ್ ನ ಲೈಫ್ ಟ್ರಸ್ಟಿ ಹಾಗೂ ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಂಜೆ ಕಾಲೇಜಿನ ವಿವಿಧ ಪಠ್ಯೆತರ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಪದವಿಯ ಜೀವನ ಬಂಗಾರದ ಜೀವನ ಎಂದೆನಿಸಿಕೊಳ್ಳಬೇಕಾದರೆ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ವಿದ್ಯಾರ್ಥಿಯ ಲಕ್ಷಣವಾಗಿದೆ ವಿದ್ಯಾರ್ಥಿಗಳು ತಾವು ಏನೆಂಬುದನ್ನು ಸಾಬೀತುಪಡಿಸಲು ಪದವಿಯೊಂದಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗುವುದನ್ನು ರೂಢಿಸಿಕೊಳ್ಳಬೇಕು. ಆಗ ತಾವು ಸಮಾಜದಲ್ಲಿ ಏನೆಂಬುದನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು. ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿ ಅವುಗಳ ಮಹತ್ವ ಏನು ಎಂಬುದನ್ನು ತಿಳಿಸಿಕೊಟ್ಟರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ಡಾ ಜಿ ಎನ್ ಮಲ್ಲಿಕಾರ್ಜುನಪ್ಪನವರು ಮಾತನಾಡುತ್ತಾ ವಿದ್ಯೆಯನ್ನು ಅರಿಸಿ ಬರುವ ವಿದ್ಯಾರ್ಥಿಗಳು ವಿದ್ಯಾಲಯಗಳಲ್ಲಿ ಪದವಿಗಳೊಂದಿಗೆ ಕ್ರಿಯಾತ್ಮಕ ಜ್ಞಾನವನ್ನು ವೃದ್ಧಿಸುವಲ್ಲಿ ಪ್ರಯತ್ನ ಪಡಬೇಕು. ಶಿಕ್ಷಣ ಪಡೆದ ನಂತರ ಉದ್ಯೋಗ ಸಿಗದೇ ಇದ್ದರೆ ಆ ಉದ್ಯೋಗದಿಂದ ಯಾವುದೇ ಅಭಿವೃದ್ಧಿಯಾಗದಿದ್ದರೆ ಶಿಕ್ಷಣಕ್ಕೆ ಯಾವುದೇ ಮಹತ್ವ ಇರುವುದಿಲ್ಲ . ತಮ್ಮ ವೃತ್ತಿ ಜೀವನದಲ್ಲಿ ತಾವು ಕಲಿತ ಶಿಕ್ಷಣವನ್ನು ಅಳವಡಿಸಿಕೊಂಡಾಗ ತಮ್ಮ ಸ್ವ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಕವಾಗಿ ಮಾತನಾಡಿದ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಪ್ರೊ ಲತಾ ಅವರು ವಿದ್ಯಾರ್ಥಿಗಳ ಅಭಿವೃದ್ಧಿಗೆ ಬೇಕಾಗುವ ಹಾಗೂ ಅವರ ಬೆಳವಣಿಗೆ ಪೂರಕವಾಗಿರುವ ಎಲ್ಲಾ ಕಾರ್ಯಕ್ರಮಗಳನ್ನು ವೇದಿಕೆ ಮೂಲಕ ಆಯೋಜಿಸಲಾಗುತ್ತದೆ ಎಂದು ಹೇಳಿದರು.