
ದೇವದುರ್ಗ,ಮಾ.೦೧- ಶಿಕ್ಷಕರು ಹಾಗೂ ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ, ಅವರು ಆಸಕ್ತಿ ಇರುವ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಕೌಶಲ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು ಎಂದು ಶಾಲೆ ಮುಖ್ಯಸ್ಥೆ ಮೇಘ ಶಿವಕುಮಾರ್ ಹರವಿ ಹೇಳಿದರು.
ಪಟ್ಟಣದ ಎಸ್.ಎಂ.ಎಸ್. ಇಂಟರ್ ನ್ಯಾಶನಲ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಎಲ್ಲರೂ ಒಂದೇ ತರಹ ಇರುವುದಿಲ್ಲ. ಅವರಲ್ಲಿ ಬಹುಮುಖ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು ಪ್ರತೀಭೆ ಗುರುತಿಸುವ ಕೆಲಸ ಮಾಡುವ ಜತೆಗೆ ಪಾಲಕರಿಗೆ ಮನವೊಲಿಸಿ ಪ್ರೋತ್ಸಾಹಿಸಬೇಕು. ಆಗ ಮಾತ್ರ ವಿದ್ಯಾರ್ಥಿ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ಮಕ್ಕಳಿಗೆ ವಿದ್ಯೆಯ ಜತೆಗೆ ವೈಜ್ಞಾನಿಕ ತಂತ್ರಜ್ಞಾನಗಳ ಜ್ಞಾನವನ್ನು ನೀಡಬೇಕಾಗಿದೆ. ವಿದ್ಯಾರ್ಥಿಗಳನ್ನು ಬಹುಮುಖ ಪ್ರತಿಭೆಯನ್ನಾಗಿ ತಯಾರಿ ಮಾಡಲು ಶಿಕ್ಷಕರು ಪ್ರಯತ್ನಿಸಬೇಕಾಗಿದೆ. ಕಲಿಕೆಯಲ್ಲಿ ಹಿಂದುಳಿದ ಹಾಗೂ ಕಡಿಮೆ ಅಂಕ ಪಡೆದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಅಂಥವರು ಮಕ್ಕಳಿಗೆ ಪ್ರೇರಣೆಯಾಗಬೇಕಿದೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಗುರುವಾದರೆ, ಮನೆಯಲ್ಲಿ ಪಾಲಕರು ಗುರುವಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಕಿಯರಾದ ಪದ್ಮಿನಿ, ನಿರ್ಮಲ, ಸ್ವಣಂಜಲಿ, ಶ್ರಾವ್ಯ, ನಾಗವೇಣಿ, ಸುನಿತಾ, ಸುಲೋಚನ, ಹೀನಾ, ಶ್ರೀದೇವಿ ಮಲ್ಲಿಕಾರ್ಜುನ, ಬಸವರಾಜ್ ಬ್ಯಾಗವಾಟ್, ವಾಸುದೇವ ನಾಯಕ್, ಪ್ರಭಾವತಿ ಸಂಗಮೇಶ್, ಶಿಲ್ಪ ಆನಂದ್ ಹರವಿ, ಚನ್ನಪ್ಪ ಸಾಹುಕಾರ, ಚಂದ್ರಶೇಖರ್ ಸ್ವಾಮಿ, ವೆಂಕಟ್ ರೆಡ್ಡಿ ಇತರರಿದ್ದರು.