ಪಠ್ಯೇತರ ಚಟುವಟಿಕೆಗಳಿಗೂ ಒತ್ತು  ನೀಡಲು ಸಲಹೆ

ದಾವಣಗೆರೆ.ಜ.೪; ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಸಂಪೂರ್ಣವಾಗಿ ನೀವು ನೀರಿನ ಕಾರಂಜಿ ರೀತಿಯಲ್ಲಿ ಹೊರಹಾಕಿ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮ ಜ್ಞಾನವನ್ನು ಅನಾವರಣಗೊಳಿಸುವ ಸದವಕಾಶ ಕಲ್ಪಿಸಿಕೊಡಲಾಗಿದೆ ಎಂದು ದಾವಣಗೆರೆ ವಿ.ವಿ. ಕುಲಪತಿಗಳಾದ ಪ್ರೊ. ಬಿ.ಡಿ. ಕುಂಬಾರ ರವರು ಹೇಳಿದರು.ನಗರದ ಎ.ವಿ. ಕಮಲಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ದಾವಣಗೆರ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಅಂತರ್ ವಲಯ ಮಟ್ಟದ ಕಾಲೇಜುಗಳಿಗಾಗಿ ಏರ್ಪಡಿಸಿದ “ಶಿವಗಂಗೋತ್ರಿ ಯುವಜನೋತ್ಸವ 2022-23”ರ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದು ಜ್ಞಾನವನ್ನು ಜಗತ್ತು ಆಳುತ್ತಿದೆ. ನೀವು ಪಠ್ಯ ವಿಷಯಕ್ಕೆ ಎಷ್ಟು ಒತ್ತನ್ನು ಕೊಡುತ್ತೀರೊ ಅಷ್ಟೇ ಒತ್ತನ್ನು ಪಠ್ಯೇತರ ಚಟುವಟಿಕೆಗಳಿಗೆ ನೀಡಬೇಕಿದೆ. ಸುಮಾರು 20ಕ್ಕೂ ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲಿ ನಡೆಸಲಾಗುತ್ತಿದೆ. ನಿಮ್ಮ ಪ್ರತಿಭೆ ಅನಾವರಣಗೊಳಿಸಿ ನಿಮ್ಮ ಭವಿಷ್ಯ ಬದಲಾಗುತ್ತದೆ ಎಂದು ಹೇಳುತ್ತಾ, ವಿಜೇತರಾದವರನ್ನು ದಾವಣಗೆರೆ ವಿ.ವಿ. ಮಟ್ಟದಲ್ಲಿ ಸ್ಪರ್ಧಿಸಿ ಅಲ್ಲಿಂದ ದಕ್ಷಿಣ ಭಾರತ (ಸೌಥ್ ಜೋನ್) ವಲಯ ಮಟ್ಟಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ದಾವಣಗೆರೆ ನಗರ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರಾದ ಡಾ. ರಣಧೀರ ಅವರು ದಾವಣಗೆರೆ ನಗರದ 30ಕ್ಕೂ ಹೆಚ್ಚು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಿ ದಾವಣಗೆರೆ ವಿ.ವಿ. ಮಟ್ಟದಲ್ಲಿ ಆಯ್ಕೆಯಾಗಲಿದ್ದಾರೆ. ನಿಮ್ಮ ಪ್ರತಿಭೆ ಸೂಕ್ತ ರೀತಿಯಲ್ಲಿ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಪಿ. ಕುಮಾರ್‌ರವರು ದಾವಣಗೆರೆ ವಿ.ವಿ.ಯ ನಗರದ ಅಂತರ್ ಕಾಲೇಜು ವಲಯ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಡಲು ಅವಕಾಶ ಮಾಡಿಕೊಟ್ಟ ಕುಲಪತಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನಿಮಗೆಲ್ಲರಿಗೂ ಸ್ಪರ್ಧೆಯಲ್ಲಿ ಭಾಗಿಯಾಗಲು ಇದೊಂದು ಸದವಕಾಶ. ಸ್ಪರ್ಧೆಯಲ್ಲಿ ಭಾಗಿಯಾಗುವ ಮೂಲಕ ನಿಮ್ಮ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಘನತೆ ಹೆಚ್ಚಿಸಬೇಕಿದೆ. ನಿಮ್ಮ ಭವಿಷ್ಯದಲ್ಲಿ ಈ ದಿನದ ಸ್ಪರ್ಧೆ ಹೊಸ ಮುನ್ನುಡಿ ಬರೆಯಲಿದೆ ಎಂದು ಶುಭಹಾರೈಸಿದರು.