ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಯ ವ್ಯಕ್ತಿತ್ವ ಅನಾವರಣ

ದಾವಣಗೆರೆ.ಜು.೨೫; ಪಠ್ಯಪೂರಕ ಚಟುವಟಿಕೆಗಳು ವಿದ್ಯಾರ್ಥಿಯ ಜ್ಞಾನಾಕಾಂಕ್ಷೆಯನ್ನು ವಿಸ್ತರಿಸಿದರೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ಆರ್ ಅಂಜನಪ್ಪ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಸಾಂಸ್ಕೃತಿಕ ಕಲರವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾನವ ಕುಲಂ ತಾನೊಂದೇ ವಲಂ ಎನ್ನುವುದು ಕನ್ನಡ ನಾಡಿನ ಸಂಸ್ಕೃತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು  ನಾವೆಲ್ಲರೂ ಒಂದೇ ಎಂಬ ಭಾವದಿಂದ ಸೇರಿ   ಸಂಸ್ಕೃತಿ  ಸಂಭ್ರಮವನ್ನು  ಆಚರಿಸುತ್ತಿರುವುದು   ಸಂತಸ ತಂದಿದೆ ಎಂದರು.ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ತಮ್ಮ ಪ್ರತಿಭಾವಂತಿಕೆಯನ್ನು  ಅನಾವರಣಗೊಳಿಸಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು. ಇದೇ ವೇಳೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಗೀತಾದೇವಿ ಮಾತನಾಡುತ್ತಾ ಬೇರೆ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುವುದು ಒಂದು ಪುಣ್ಯ ಏಕೆಂದರೆ ನಿಮ್ಮಂತಹ ವಿದ್ಯಾರ್ಥಿಗಳ ಸಂಭ್ರಮದಲ್ಲಿ ನಾವು ಕೂಡ ಒಂದು ಭಾಗವಾಗುತ್ತೇವೆ ಎಂದು  ಸಂತಸ  ವ್ಯಕ್ತಪಡಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಲತಾ ಅವರು ಮಾತನಾಡುತ್ತಾ  ಸಂಸ್ಕೃತಿ ಒಂದು ಜೀವನ ವಿಧಾನ ಇದು ನಿಮ್ಮ ಮಾತಿನಲ್ಲಿ ಬರವಣಿಗೆಯಲ್ಲಿ  ಉಡುಪಿನಲ್ಲಿ ಅಭಿವ್ಯಕ್ತಗೊಳ್ಳಲಿದೆ ಎಂದರು.ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ತಿರುಮಲ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಕಾಲೇಜನ್ನಾಗಿ ಪರಿವರ್ತಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎನ್ಎಸ್ಎಸ್ ಸಮಿತಿಯ ಸಂಚಾಲಕರು ಮತ್ತು ತರಗತಿ ಮೇಲ್ವಿಚಾರಕರಾದ ಪ್ರೊ. ಗಿರಿ ಸ್ವಾಮಿಯವರು ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ವಾಗುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು  ಹಾಗೂ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ನಿಮ್ಮ ಉಡುಪುಗಳನ್ನು ನೋಡಿ ಹೃದಯಾನಂದವಾಗುತ್ತಿದೆ. ಈ ಸಂಭ್ರಮ ನಿಮ್ಮ ಜೀವನದುದ್ದಕ್ಕೂ ಸಾಗಲಿ ಎಂದು ಹರ್ಷ ವ್ಯಕ್ತಪಡಿಸಿದರು ಈ ಕಾರ್ಯಕ್ರಮದಲ್ಲಿ ಗಣಕ ವಿಜ್ಞಾನ  ವಿಭಾಗದ ಮುಖ್ಯಸ್ಥರಾದ  ಪ್ರೊ. ನಟರಾಜ್ ಜಿ ಆರ್. ಗಣಿತ ಶಾಸ್ತ್ರ ವಿಭಾಗದಸಹಪ್ರಾಧ್ಯಾಪಕರಾದ ಡಾ. ಕೆ ಎಂ ಯೋಗೇಶ್. ಸವಿತಾ ಬಿ ಮೇಗಳಮನಿ. ರೇಣುಕಾ ಬೂದಿಹಾಳ್. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕಾಸಲಸುರೇಶ್. ಡಾ. ರಿಹಾನ ಬಾನು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೇಖಾ ಎಂ ಆರ್, ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಲೋಲಾಕ್ಷಿ, ಹಾಗೂ ತರಗತಿ ಮೇಲ್ವಿಚಾರಕರಾದ ಪ್ರೊ. ಶಶಿಕಲಾ ಜಿ ಟಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ತ್ರಿವೇಣಿ ಎಂ ಎಲ್, ಯು ನರೇಶ್ ಮಂಜುನಾಥ್, ಪ್ರೊ. ಭೀಮಣ್ಣ. ಸುಣಗಾರ, ಡಾ. ಸೋಮಶೇಖರ್ ಮುಂತಾದ ಗುರುವೃಂದದವರು ಉಪಸ್ಥಿತರಿದ್ದರು.