ಪಠ್ಯಪುಸ್ತಕ ಮಾರ್ಚ್ ಅಂತ್ಯದೊಳಗೆ ಶಾಲೆಗಳಿಗೆ ಸರಬರಾಜು-ಬಿಇಒ ಕನ್ನಯ್ಯ

ಕೋಲಾರ, ಮಾ,೧೮- ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಬೇಸಿಗೆ ರಜೆಗೆ ಮುನ್ನವೇ ಶಾಲೆಗಳಿಗೆ ತಲುಪಿಸುವ ಐತಿಹಾಸಿಕ ನಿರ್ಧಾರವನ್ನು ಶಿಕ್ಷಣ ಇಲಾಖೆ ಮತ್ತು ಸರ್ಕಾರ ಕೈಗೊಂಡಿದ್ದು, ಮಾರ್ಚ್ ಅಂತ್ಯದೊಳಗೆ ಎಲ್ಲಾ ಶಾಲೆಗಳಿಗೂ ರವಾನೆಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದರು.
ನಗರದ ಬಿಇಒ ಕಚೇರಿಯ ಪಠ್ಯಪುಸ್ತಕಗಳ ಮಳಿಗೆಯಲ್ಲಿ ಬುಧವಾರ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಸರ್ಕಾರಿ,ಅನುದಾನಿತ ಶಾಲೆಗಳಿಗೆ ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಹಿಂದಿನ ವರ್ಷಗಳಲ್ಲಿ ಶಾಲೆಗಳು ಆರಂಭವಾಗುವ ಸಂದರ್ಭದಲ್ಲಿ ಪುಸ್ತಕಗಳ ಸರಬರಾಜು ನಡೆಯುತ್ತಿತ್ತು ಎಂದ ಅವರು, ಇದರಿಂದ ಅನೇಕ ಕಡೆಗಳಲ್ಲಿ ಸಕಾಲಕ್ಕೆ ಪುಸ್ತಕಗಳು ಸರಬರಾಜಾಗುತ್ತಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು ಎಂದರು.
ಈ ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಸರ್ಕಾರ ಒದಗಿಸಿದ್ದು, ಶಾಲೆಗಳಿಗೆ ತಲುಪಿಸುವ ಕೆಲಸವನ್ನು ಆಯಾ ಶಿಕ್ಷಣ ಸಂಯೋಜಕರ ನೇತೃತ್ವದಲ್ಲಿ ಮಾಡಲಾಗುತ್ತಿದೆ ಎಂದ ಅವರು, ಮುಂದಿನ ಶೈಕ್ಷಣಿಕ ವರ್ಷದ ಆರಂಭದ ದಿನವೇ ಮಕ್ಕಳ ಕೈಗೆ ಪುಸ್ತಕ ತಲುಪಲಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಸ್ಯಾಟ್ಸ್ ಅಥವಾ ಸ್ಟುಡೆಂಟ್ಸ್ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಕೈಗೊಂಡ ಕ್ರಮವಾಗಿದ್ದು, ಮಕ್ಕಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೂ ಬೇಡಿಕೆಗೆ ತಕ್ಕಂತೆ ಪುಸ್ತಕಗಳ ದಾಸ್ತಾನು ಮಾಡಲಾಗಿದೆ, ಯಾವುದೇ ಶಾಲೆಗೆ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಿರುವುದಾಗಿ ತಿಳಿಸಿದ ಅವರು, ಈ ಬಾರಿ ಪುಸ್ತಕ ಸಾಗಾಣಿಕೆ, ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಾಗಿದೆ ಎಂದು ತಿಳಿಸಿದರು.
ಪಠ್ಯಪುಸ್ತಕ ವಿತರಣೆ ಉಸ್ತುವಾರಿ ಅಧಿಕಾರಿ ಗಾಯತ್ರಿ ಮಾತನಾಡಿ, ಪ್ರತಿ ಶಾಲೆಯಿಂದ ಪುಸ್ತಕಗಳ ಅಗತ್ಯತೆ ಕುರಿತ ಮಾಹಿತಿಯನ್ನು ಸ್ಯಾಟ್ಸ್‌ನಲ್ಲೇ ಅಪ್‌ಡೇಟ್ ಮಾಡಲು ಸೂಚಿಸಿದ್ದು, ಅದರಂತೆ ಕ್ರಮವಹಿಸಲಾಗಿದೆ, ಪ್ರತಿ ಶಾಲೆಗೂ ಬೇಸಿಗೆ ರಜೆಗೆ ಮುನ್ನವೇ ಪುಸ್ತಕಗಳು ತಲುಪಲಿವೆ ಎಂದು ತಿಳಿಸಿದರು.
ಪಠ್ಯಪುಸ್ತಕ ವಿತರಣೆ ಅಧಿಕಾರಿ ಇಸಿಒ ವೆಂಕಟಾಚಲಪತಿ ಮಾತನಾಡಿ, ಶಾಲೆಗೆ ಬರುವ ಪುಸ್ತಕಗಳನ್ನು ಹಾಳಾಗದಂತೆ ಸುರಕ್ಷಿತವಾಗಿ ಸಂಗ್ರಹಿಸಿ, ಮುಂದಿನ ಶೈಕ್ಷಣಿಕ ವರ್ಷದ ಆರಂಭದ ದಿನದಂದೇ ಮಕ್ಕಳಿಗೆ ವಿತರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕಿ ಶಶಿವಧನ, , ಸುಭಾಷ್ ಶಾಲೆಯ ಮುಖ್ಯಶಿಕ್ಷಕ ವೇಣುಗೋಪಾಲ್, ತೊಟ್ಲಿ ಶಾಂತಿನಿಕೇತನ ಶಾಲೆ ಮುಖ್ಯಶಿಕ್ಷಕ ಶಂಕರರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.