ಪಠ್ಯದ ಜತೆಗೆ ಡಿಜಿಟಲ್ ಮಾಧ್ಯಮದ ಸದ್ಬಳಕೆಗೆ ಸಲಹೆ

ಮಧುಗಿರಿ, ಜು. ೨೩- ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಕಾ ನಿರ್ವಹಣಾ ವ್ಯವಸ್ಥೆಯು (ಎಲ್‌ಎಂಎಸ್) ಡಿಜಿಟಲ್ ಕಲಿಕೆಯ ವಿಷಯ ಸಂವಹನ, ಲಭ್ಯತೆ ಮತ್ತು ಮೌಲ್ಯಮಾಪನಗಳಲ್ಲಿ ಪರಿವರ್ತಕ ಬದಲಾವಣೆ ತಂದು ಭವಿಷ್ಯದಲ್ಲಿ ಸಂಪದ್ಬರಿತ ಮಾನವ ಸಂಪನ್ಮೂಲ ಸೃಷ್ಟಿಯಾಗಲಿದೆ ಎಂದು ಪ್ರಾದೇಶಿಕ ಕಾಲೇಜು ಶಿಕ್ಷಣ ಕಚೇರಿಯ ಎಲ್‌ಎಂಎಸ್ ವಿಶೇಷಾಧಿಕಾರಿ ಪ್ರೊ.ಕೆ.ಸಿ.ಬಸವರಾಜು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಏರ್ಪಡಿಸಿದ್ದ ಕರ್ನಾಟಕ ಎಲ್‌ಎಂಎಸ್ ಕಲಿಕಾ ನಿರ್ವಹಣಾ ವ್ಯವಸ್ಥೆಯ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್‌ಎಂಎಸ್‌ನಿಂದ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ನಡೆಯುವ ದೈನಂದಿನ ಪಾಠ ಪ್ರವಚನಗಳ ಜತೆಗೆ ಡಿಜಿಟಲ್ ಮಾಧ್ಯಮದ ಮೂಲಕ ಪಠ್ಯವಿಷಯಗಳು ದೊರೆಯಲಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಎಲ್‌ಎಂಎಸ್ ನೋಡಲ್ ಅಧಿಕಾರಿ ಪ್ರೊ.ಎನ್.ಮಂಜುನಾಥ್ ಮಾತನಾಡಿ, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎಲ್‌ಎಂಎಸ್ ಕಲಿಕಾ ನಿರ್ವಹಣಾ ವ್ಯವಸ್ಥೆಯು ರಾಜ್ಯದ ೧೪ ವಿಶ್ವವಿದ್ಯಾನಿಲಯಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ನೀಡುವ ೫೩೧ ಸರ್ಕಾರಿ ಕಾಲೇಜುಗಳ ಸುಮಾರು ೪.೫೦ ಲಕ್ಷ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ಕಲಿಕಾ ಸಾಮಗ್ರಿಗಳಾದ ಪಿಪಿಟಿ., ನೋಟ್ಸ್, ವಿಡಿಯೋ, ಬಹು ಆಯ್ಕೆ ಪ್ರಶ್ನೆಗಳನ್ನು ಅನುಭವಿ ಅಧ್ಯಾಪಕರಿಂದ ತಯಾರಿಸಿ, ಎಲ್‌ಎಂಎಸ್ ಆ?ಯಪ್‌ಗೆ ಅಪ್ಲೋಡ್ ಮಾಡಿದ್ದು, ಕಾಲೇಜಿನಲ್ಲಿ ದೊರೆಯುವ ಉಚಿತ ವೈಫೈ ಬಳಸಿ ಡೌನ್‌ಲೋಡ್ ಮಾಡಿ, ಆಪ್‌ಲೈನ್ ವಿಧಾನದಲ್ಲಿ ಸಹ ಬಳಸಬಹುದಾಗಿದೆ. ವಿದ್ಯಾರ್ಥಿಗಳ ಹಾಜರಾತಿ, ಪಠ್ಯವಿಷಯ ಚರ್ಚೆ, ಆಂತರಿಕ ಕಿರು ಪರೀಕ್ಷೆಗಳು, ಸಂಯೋಜಿತ ಕಾರ್ಯಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಸಲ್ಲಿಸಿ, ಪಠ್ಯಗಳ ಕುರಿತ ಸಂದೇಹ ಪರಿಹಾರಕ್ಕೆ ಆನ್‌ಲೈನ್ ವೇದಿಕೆ ಕಲ್ಪಿಸಲಾಗಿದೆ. ಸಕ್ರಿಯವಾಗಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಆಯಾ ತರಗತಿಯ ಲೀಡರ್ ಬೋರ್ಡ್‌ನಲ್ಲಿ ಉನ್ನತ ರ್ಯಂಕ್ ಪಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಕಲಿಕಾ ಮಟ್ಟವನ್ನು ಅರಿತು, ತಮ್ಮ ಬೌದ್ದಿಕ ಸಾಮರ್ಥ್ಯ ವೃದ್ದಿಸಿಕೊಳ್ಳಬಹುದು ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಅಶೋಕ್ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿಯ ಎಲ್.ಎಂ.ಎಸ್. ಜಾರಿಯಿಂದ ಪ್ರಸಕ್ತ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಪ್ರವರ್ಧಮಾನಕ್ಕೆ ಬಂದಿದ್ದು, ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳಿಗೆ ಅಧ್ಯಾಪಕರು, ವಿದ್ಯಾರ್ಥಿಗಳನ್ನು ಸಮೃದ್ದಗೊಳಿಸಿ, ಡಿಜಿಟಲ್ ಅಂತರವನ್ನು ಅಳಿಸಿ, ಜಾಗತಿಕ ಮನ್ನಣೆ ಪಡೆಯುವಂತೆ ಪ್ರೇರೇಪಿಸುವ ಅತ್ಯುತ್ತಮ ಯೋಜನೆಯಾಗಿದೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯವು ಎಲ್.ಎಂ.ಎಸ್.ನ್ನು ಅನುಷ್ಟಾನಗೊಳಿಸಿದ್ದು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ-ಕಲಿಕೆಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಬಲ್ಲ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ದೂರದೃಷ್ಟಿಯ ಕ್ರಮವಾಗಿದ್ದು, ನಿರಂತರ ಮೌಲ್ಯಮಾಪನ ಮತ್ತು ವಿಶ್ಲೇಷಣೆಗೆ ಅವಕಾಶ ನೀಡಿದೆ. ವಿದ್ಯಾರ್ಥಿಗಳನ್ನು ನಿಪುಣರೂ, ಜ್ಞಾನವಂತರನ್ನಾಗಿ ಉದ್ಯೋಗಾರ್ಹತೆ ಗಳಿಸಿಕೊಳ್ಳುವ ವರ್ಗವನ್ನಾಗಿ ರೂಪಿಸುತ್ತದೆ. ಆದುದರಿಂದ ಎಲ್ಲರೂ ಎಲ್‌ಎಂಎಸ್‌ನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ಎಲ್‌ಎಂಎಸ್ ಸಂಯೋಜನಾಧಿಕಾರಿ ಪ್ರೊ.ಜಿ. ವೇದಲಕ್ಷ್ಮಿ, ಡಾ.ಗಿರಿಜಾ, ಪ್ರೊ.ಕೆ.ಎಂ. ಪುರುಷೋತ್ತಮ್, ಪ್ರೊ.ಬಿ.ಮಂಜುನಾಥ್, ಎನ್.ನರೇಶ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು. ಪವಿತ್ರ ಪ್ರಾರ್ಥಿಸಿದರು. ಪ್ರೊ.ದಿವಾಕರ್ ಸ್ವಾಗತಿಸಿದರು. ಡಾ.ಮಂಜುಭಾರ್ಗವಿ ವಂದಿಸಿದರು. ಪ್ರೊ.ಟಿ.ಎನ್.ನರಸಿಂಹಮೂರ್ತಿ ಕಾರ್ಯಕ್ರಮ ನಿರೂಪಿಸಿದರು.