ಪಠ್ಯದಲ್ಲಿ ಪುನೀತ್ ವಿಷಯ ಸೇರ್ಪಡೆ: ಸಿಎಂ

ಬೆಂಗಳೂರು,ನ.೧- ಶಾಲಾ ಪಠ್ಯದಲ್ಲಿ ಪುನೀತ್ ರಾಜ್‌ಕುಮಾರ್‌ರವರ ಪಠ್ಯ ಸೇರ್ಪಡೆ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್‌ಕುಮಾರ್ ವಿಚಾರದಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಸರ್ಕಾರ ಮಾಡಲಿದೆ, ಶಾಲಾ ಪಠ್ಯದಲ್ಲಿ ಪುನೀತ್ ಪಠ್ಯ ಸೇರ್ಪಡೆ ಬಗ್ಗೆಯೂ ತೀರ್ಮಾನ ಮಾಡುತ್ತೇವೆ ಎಂದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರು ಕನ್ನಡಕ್ಕಾಗಿ ಬದುಕನ್ನೇ ಮೀಸಲಿಟ್ಟವರು, ಕನ್ನಡದಲ್ಲಿ ಅಸ್ಮಿತೆಯ ಬಗ್ಗೆ ಜಾಗೃತಿ ಮೂಡಿಸಿದವರು, ನಾಡಿನಲ್ಲಿ ಪರೋಪಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಅಂಗಾಂಗಗಳನ್ನೇ ದಾನ ಮಾಡಿ ಮಾದರಿಯಾಗಿ ಲಕ್ಷಾಂತರ ಜನರು ಅಂಗಾಂಗ ದಾನ ಮಾಡಲು ಪ್ರೇರಣಾ ಶಕ್ತಿಯಾಗಿದ್ದಾರೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಂದು ಸಂಜೆ ಪ್ರದಾನ ಮಾಡಲಾಗುತ್ತದೆ ಎಂದರು.
ಪಠ್ಯ ಕ್ರಮದಲ್ಲಿ ಪುನೀತ್‌ರವರ ಪಾಠ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡುವುದಾಗಿ ಹೇಳಿದರು.
ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಯಾಗಿ ಉಳಿಯದೇ ಪ್ರತಿಯೊಬ್ಬ ಕನ್ನಡಿಗರ ಹೃದಯಗಳಲ್ಲಿ ಕನ್ನಡ ಡಿಂಡಿiವಾ ಬಾರಿಸಬೇಕು, ಕನ್ನಡಿಗರು ಶಿಕ್ಷಣ, ಉದ್ಯೋಗ ಮತ್ತು ಎಲ್ಲ ರಂಗಗಳಲ್ಲೂ ಮುಂದೆ ಬರಲು ಸರ್ಕಾರ ರೂಪಿಸಿರುವ ಯೋಜನೆಗಳ ಲಾಭವನ್ನು ಕನ್ನಡಿಗರು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕನ್ನಡ ರಾಜ್ಯೋತ್ಸವ ದಿನವಾದ ಇಂದು ಯುವಕರು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು, ಪ್ರತಿ ಕನ್ನಡಿಗನು ಕನ್ನಡ ಅಸ್ಮಿತೆ ಸ್ವಾಭಿಮಾನದ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಿದ್ದರೂ ಕನ್ನಡಿಗರಾಗಿಯೇ ಇರಬೇಕು ಎಂದರು.
ಸಮಸ್ತ ಕನ್ನಡ ನಾಡಿನ ಜನತೆಗೆ ೬೭ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಕನ್ನಡ ರಾಜ್ಯೋತ್ಸವದ ವಿಶೇಷ ಪವರ್
ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರಿಗೆ ’ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನ. ೧ ರಂದೇ ಪ್ರಶಸ್ತಿ ನೀಡಬೇಕೆಂಬುದು ನನ್ನ ಇಚ್ಛೆಯಾಗಿತ್ತು ಎಂದರು.
ಆಸಿಡ್ ಸಂತ್ರಸ್ತೆಗೆ ಉದ್ಯೋಗ
ಇತ್ತೀಚೆಗೆ ಆಸಿಡ್ ದಾಳಿಗೊಳಗಾದ ಯುವತಿ ತಮ್ಮನ್ನು ಇಂದು ಭೇಟಿ ಮಾಡಿದ್ದಳು, ಈ ಯುವತಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವಂತೆ ಕಾರ್ಯದರ್ಶಿಗೆ ಸೂಚಿಸಿದ್ದೇನೆ, ವಸತಿ ಸಚಿವರ ಬಳಿ ಮಾತನಾಡಿ, ಬಡವರಿಗಾಗಿ ನಿರ್ಮಿಸಲಾಗುತ್ತಿರುವ ೪೦ ಸಾವಿರ ಫ್ಲಾಟ್‌ಗಳಲ್ಲಿ ಒಂದು ಫ್ಲಾಟ್‌ನ್ನು ನೀಡಲು ಕ್ರಮಕೈಗೊಳ್ಳುತ್ತೇನೆ ಎಂದರು.
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ನೀಡುತ್ತಿದ್ದ ೩ ಸಾವಿರ ಮಾಸಾಶನವನ್ನು ೧೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.