ಪಠ್ಯಕ್ರಮ ವಿನ್ಯಾಸ, ರಚನೆ ಕುರಿತ ಕಾರ್ಯಾಗಾರದಲ್ಲಿ ಎಐಡಿಎಸ್‍ಓ ಭಾಗಿ: ಸಮಸ್ಯೆ, ಗೊಂದಲಗಳ ನಿವಾರಣೆಗೆ ಒತ್ತಾಯ

ಕಲಬುರಗಿ:ಮೇ.28: ಕರ್ನಾಟಕ ಸರ್ಕಾರ ರಾಜ್ಯ ಶಿಕ್ಷಣ ನೀತಿ ಆಯೋಗ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಪಠ್ಯ ಕ್ರಮ ವಿನ್ಯಾಸ ಮತ್ತು ರಚನೆ ಕುರಿತು ವಿಭಾಗೀಯ ಮಟ್ಟದ ಕಾರ್ಯಾಗಾರವು ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಜರುಗಿತು.
ಸಭೆಯಲ್ಲಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹಣಮಂತ್ ಎಸ್.ಎಚ್. ಅವರು ನಿಯೋಗದ ನೇತೃತ್ವ ವಹಿಸಿ ಹಲವಾರು ಅಭಿಪ್ರಾಯಗಳನ್ನು ಕಾರ್ಯಾಗಾರದಲ್ಲಿ ಮಂಡಿಸಿದರು.
ಸರ್ಕಾರಿ ಕಾಲೇಜುಗಳ ಪರಿಸ್ಥಿತಿಯು ಇಂದು ತುಂಬಾ ಶೋಚನೀಯ ಪರಿಸ್ಥಿತಿಯಲ್ಲಿವೆ. ಒಂದು ದಿನ ರಜೆ ಸಿಕ್ಕರೂ ವಿದ್ಯಾರ್ಥಿಗಳು ಕೆಲಸವನ್ನು ಹುಡುಕಿಕೊಂಡು ಹೋಗುವಂತಹ ಗಂಭೀರ ಪರಿಸ್ಥಿತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಕಾಲೇಜು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಓದುವ ವಾತಾವರಣ ಇಲ್ಲದಾಗಿದೆ. ವಿದ್ಯಾರ್ಥಿಗಳನ್ನು ಆಳವಾಗಿ ಓದಿನಲ್ಲಿ ತೊಡಗಿಸುವಂತಹ ಹಾಗೂ ಮಹಾನ್ ವ್ಯಕ್ತಿಗಳ ಆದರ್ಶ ಮೌಲ್ಯಗಳನ್ನು ಎತ್ತಿಹಿಡಿಯುವ ವಿಷಯಗಳನ್ನೊಳಗೊಂಡ ಪಠ್ಯಕ್ರಮ ರಚಿನೆಯಾಗಬೇಕು. ಶೈಕ್ಷಣಿಕ ವರ್ಷದಲ್ಲಿ ಸೃಷ್ಟಿಯಾದ ಗೊಂದಲಗಳು, ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು. ಯುಯುಸಿಎಮ್‍ಎಸ್ ಪೆÇರ್ಟಲ್‍ನಿಂದಾಗಿ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೂಡಲೇ ಅದನ್ನು ರದ್ದುಗೊಳಿಸಿ, ಹಳೆಯ ರೀತಿಯಲ್ಲಿ ಮುಂದುವರಿಸುವಂತೆ ಅವರು ಕೋರಿದರು.
ಕೌಶಲ್ಯ ಆಧಾರಿತ ಶಿಕ್ಷಣಕ್ಕಿಂತಲೂ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಒಬ್ಬ ವ್ಯಕ್ತಿಯನ್ನು ಕೇವಲ ಕೌಶಲ್ಯ ನೀಡಿ ಡಾಕ್ಟರು, ಇಂಜಿನಿಯರಿಂಗ್ ಮಾಡುವುದೇ ಶಿಕ್ಷಣದ ಉದ್ದೇಶ ಆಗಬಾರದು. ಅಲ್ಲಿ ಮೌಲ್ಯಗಳು ಬಹಳ ಮುಖ್ಯವಾಗಬೇಕು. ಮುಂದುವರೆದಂತಹ ಅಮೆರಿಕ ಹಾಗೂ ಯುರೋಪ್ ದೇಶಗಳು ಇಂದು ಕೌಶಲ್ಯ ಆಧಾರಿತ ಶಿಕ್ಷಣವನ್ನು ತಿರಸ್ಕರಿಸಿ ಭಾರತದ ಶಿಕ್ಷಣದ ಕಡೆ ಆಕರ್ಷಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗವು ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಪರವಾಗಿರುವ ಪಠ್ಯಕ್ರಮಗಳನ್ನು ತರಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓಜಿಲ್ಲಾ ಕಾರ್ಯದರ್ಶಿ ತುಳಜರಾಮ್ ಎನ್.ಕೆ, ಖಜಾಂಚಿ ವೆಂಕಟೇಶ್ ದೇವದುರ್ಗ, ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ, ಜಿಲ್ಲಾ ಸಮಿತಿ ಸದಸ್ಯೆ ಪ್ರೀತಿ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.